ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯಾದ್ಯಂತ ಹೋರಾಟ

ರಾಯಚೂರು,ನ.೨- ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಪಡೆಯಲು ನ್ಯಾಯಮೂರ್ತಿ ಎ.ಜೆ
ಸದಾಶಿವ ಆಯೋಗದ ವರದಿ ಜಾರಿಗಾಗಿ ಶೀಘ್ರವೇ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದೆಂದು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹೇಳಿದರು.
ರಾಯಚೂರು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಿಮಿತ್ಯ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ರವಿವಾರ ರಾಯಚೂರಿಗೆ ಆಗಮಿಸಿದ ಅವರು ನಗರದ ನೃಪತುಂಗ ಸಭಾಂಗಣದಲ್ಲಿ ಮಾದಿಗ ಮಹಾಸಭಾದ ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾದಿಗರು ರಾಜ್ಯದಲ್ಲಿ ರಾಜಕೀಯವಾಗಿ ಮುಂದೆ ಬರಬೇಕಾಗಿದೆ. ರಾಜ್ಯಾಧಿಕಾರದಿಂದಲೇ ಮಾದಿಗರ ಅಭಿವೃದ್ಧಿ ಸಾಧ್ಯ. ಈ ಹಿನ್ನಲೆಯಲ್ಲಿ ಮಾದಿಗ ಮಹಾಸಭಾ ಮೂಲಕ ರಾಜ್ಯದಲ್ಲಿ ಮಾದಿಗರನ್ನು ಜಾಗೃತಿಗೊಳಿಸುವ ಕೆಲಸವಾಗಬೇಕಾಗಿದೆ. ಕೊರೋನಾ ಮುಗಿದ ನಂತರ ಮುಂದಿನ ಜನವರಿಯಿಂದ ರಾಜ್ಯದ ಎಲ್ಲಾ ೩೦ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಸಮಿತಿಗಳನ್ನು ರಚಿಸಿ ಸಮಾಜದ ಇನ್ನಿತರ ಮುಖಂಡರ ಜೊತೆ ಪ್ರವಾಸ ಮಾಡಿ ಮಾದಿಗ ಸಮಾಜವನ್ನು ಸಂಘಟನೆ ಮಾಡಲಾಗುವುದು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿ ಅದನ್ನು ಅಂಗೀಕರಿಸುವ ಮತ್ತು ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ಸಂಘಟಿತ ಹೋರಾಟ ರೂಪಿಸಲಾಗುವುದು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರಕಾರದಿಂದ ಸ್ಪ್ರಶ್ಯ ಮತ್ತು ಅಸ್ಪ್ರಶ್ಯರ ಪಟ್ಟಿ ಕಳಿಸಬೇಕಾಗಿದೆ. ವರದಿ ಜಾರಿಗೆ ಶಿಫಾರಸು ಮಾಡಬೇಕಾಗಿದೆ. ಆದರೆ ಇದು ಇನ್ನೂ ವಿಳಂಬ ವಾಗುವ ಕಾರಣ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲು ಕಾರ್ಯಯೋಜನೆ ರೂಪಿಸಲಾಗುವುದೆಂದು ಆರ್.ಬಿ.ತಿಮ್ಮಾಪುರ ಹೇಳಿದರು.
ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಮಾತನಾಡಿ ಜಿಲ್ಲೆಯಲ್ಲಿ ಮಾದಿಗ ಮಹಾಸಭಾದ ಸಂಘಟನೆ ಎಲ್ಲಾ ತಾಲೂಕುಗಳಲ್ಲಿ ನಡೆದಿದ್ದು ಮುಂಬರುವ ದಿನಗಳಲ್ಲಿ ಸಮಾಜದ ಎಲ್ಲಾ ಮುಖಂಡರ ಸಲಹೆ, ಸೂಚನೆ ಮೇರೆಗೆ ಮಾದಿಗ ಮಹಾಸಭಾದಿಂದ ಜಿಲ್ಲೆಯಲ್ಲಿ ಜಿಲ್ಲಾ ಸಮಾವೇಶ ಮಾಡಲಾಗುವುದು. ಜಿಲ್ಲೆಯಲ್ಲಿರುವ ಒಂದು ಮೀಸಲಾತಿ ವಿಧಾಸಭಾ ಕ್ಷೇತ್ರವನ್ನು ಮಾದಿಗರು ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮಾದಿಗ ಸಮಾಜದ ಮುಖಂಡ ಹಾಗೂ ಕೆಪಿಸಿಸಿ ವಕ್ತಾರ ಎ.ವಸಂತಕುಮಾರ ಮಾತನಾಡಿ ಇಂದಿನ ದಿನಗಳಲ್ಲಿ ಶೋಷಿತರಾದ ನಾವು ಮೀಸಲಾತಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಮಾದಿಗ ಸಮಾಜದವರು ಒಗ್ಗಟ್ಟಾಗಿ ಹೋರಾಟ ಮಾಡಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ನಮ್ಮ ಹಕ್ಕನ್ನು ನಾವು ಪಡೆಯಬೇಕೆಂದು ಹೇಳಿದರು.
ಮಾದಿಗ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಮಾದಿಗ ಮಹಾಸಭಾದ ರಾಜ್ಯ ಸಮಿತಿ ಸದಸ್ಯ ದೊಡ್ಡಪ್ಪ ಮುರಾರಿ, ಜಿಲ್ಲಾ ಉಪಾಧ್ಯಕ್ಷ ಅರಳಪ್ಪ ಯದ್ದಲದಿನ್ನಿ, ಕಾರ್ಯಾಧ್ಯಕ್ಷ ಸ್ವಾಮಿದಾಸ್ ಕುರ್ಡಿ, ವಿವಿಧ ತಾಲೂಕು ಘಟಕದ ಅಧ್ಯಕ್ಷರಾದ ಅನಿಲ್ ಕುಮಾರ್ ಮಾನ್ವಿ, ಪಿ.ಯಲ್ಲಪ್ಪ ರಾಯಚೂರು, ಬೂತಪ್ಪ ದೇವದುರ್ಗ, ಅಮರೇಶ ಗಿರಿಜಾಲಿ ಸಿಂಧನೂರು, ಮಲ್ಲೇಶ ಮಾಚನೂರು, ರಮೇಶ ಲಿಂಗಸ್ಗೂರು, ಅಶೋಕ ಮುರಾರಿ ಮಸ್ಕಿ, ಮುಖಂಡರಾದ ಪ್ರಭುರಾಜ ಕೊಡ್ಲಿ, ಎಲ್.ಕೆ ಮರಿಯಣ್ಣ, ಪಿ.ಪರಮೇಶ, ಬಾಲಸ್ವಾಮಿ ದಿದ್ದಿಗಿ, ಭೀಮೇಶ ರಾಯಚೂರು, ಎ.ವಸಂತಕುಮಾರ ಅರೋಲಿ, ಮಲ್ಲೇಶ ಕುರ್ಡಿ, ನವೀನ್ ಕುಮಾರ್ ಕುರ್ಡಿ, ಯಲ್ಲಪ್ಪ ಆರ್.ಯದ್ದಲದೊಡ್ಡಿ, ಹನುಮೇಶ ಮುದ್ದಾಪುರ, ದೇಶರಾಜ ಕೊಡ್ಲಿ, ಪ್ರೀತಮ್ ಕೊಡ್ಲಿ, ಜಯರಾಜ ಕೊಟ್ನೆಕಲ್ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.