ನ್ಯಾ. ಸದಾಶಿವ ಆಯೋಗದ ವರದಿ ಕೈಬಿಡಿ

ಔರಾದ :ಜ.7: ಪರಿಶಿಷ್ಟ ಸಮುದಾಯದ 101 ಜಾತಿಗಳಿಗೆ ಮಾರಕವಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ನ.10ರಂದು ಬೆಂಗಳೂರಿನಲ್ಲಿ ಗೋರ ಸೇನಾ ರಾಷ್ಟ್ರೀಯ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಗೋರಸೇನಾ ರಾಜ್ಯಾಧ್ಯಕ್ಷ ಬಾಳುಸಾಹೇಬ ರಾಠೋಡ ತಿಳಿಸಿದರು.

ಪಟ್ಟಣದ ಗೋರಸೇನಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿಗೆ ಕೆಲ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ. ಆದರೆ, ವರದಿ ಬಹಿರಂಗವಾಗಿಲ್ಲ. ವರದಿ ಬಗ್ಗೆ ಸಾರ್ವಜನಿಕ ಚರ್ಚೆಯೂ ಆಗಿಲ್ಲ. ಇದರಿಂದಾಗಿ ಕೆಲ ಜಾತಿಗಳ ಹಿತಕ್ಕಾಗಿ ವರದಿಯ ಶಿಫಾರಸುಗಳನ್ನು ಜಾರಿ ಮಾಡುವುದು ಸರಿಯಲ್ಲ ಎಂದು ದೂರಿದರು. ಸರ್ಕಾರ ವರದಿಯ ಶಿಫಾರಸುಗಳ ಜಾರಿಗೆ ಮುಂದಾದರೆ ಎಲ್ಲ ತಾಂಡಾ, ದೊಡ್ಡಿ ಹಟ್ಟಿಯಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ ಪ್ರತಿಭಟನೆಯಲ್ಲಿ ರಾಜ್ಯದ 3600 ತಾಂಡಾಗಳ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ, ಈಗಾಗಲೇ ಔರಾದ-ಕಮಲನಗರ ತಾಲೂಕುನಿಂದ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದಿನೇಶ ರಾಠೋಡ, ಕಮಲನಗರ ತಾಲೂಕು ಅಧ್ಯಕ್ಷ ಉತ್ತಮ ಜಾಧವ, ರಾಜಕುಮಾರ ದೇಗಾವತ, ಗಣಪತಿ ರಾಠೋಡ, ಕಾಶಿನಾಥ ರಾಠೋಡ, ಮಾರುತಿ ಪವಾರ, ಅನಿಲ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಈಗಾಗಲೇ ಆಡಳಿತ ಸರ್ಕಾರದಲ್ಲಿ ನಮ್ಮ ಸಮಾಜದ ಶಾಸಕರು, ಸಚಿವರು ಇದ್ದಾರೆ, ನಮ್ಮ ನಮ್ಮ ಸಮಾಜಕ್ಕೆ ಮಾರಕವಾಗಿರುವ ವರದಿಯ ಬಗ್ಗೆ ಧ್ವನಿ ಎತ್ತದೆ ಇರುವುದು ಶೋಚನೀಯ ಸ್ಥಿತಿ, ಇದೇ ರೀತಿ ಮುಂದುವರಿದರೆ ಅಂತಹವರಿಗೆ ಸಮಾಜ ತಕ್ಕ ಪಾಠ ಕಲಿಸಲಿದೆ.

ಬಾಳುಸಾಹೇಬ ರಾಠೋಡ
ರಾಜ್ಯಾಧ್ಯಕ್ಷರು, ಗೋರಸೇನಾ ಸಂಘಟನೆ