
ಬಸವನಬಾಗೇವಾಡಿ: ಮಾ.28:ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮಿಸಲಾತಿಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬಹು ದಿನಗಳ ಹೋರಾಟಕ್ಕೆ ಸರಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳಮಿಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಪಾರಸು ಮಾಡಿದ ಕೃಮವು ಸ್ವಾಗತಾರ್ಹವಾಗಿದೆ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ದೇವರಮನಿ ಹೇಳಿದರು.
ಪಟ್ಟಣದ ಡಾ: ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಹೂಮಾಲೆ ಅರ್ಪಿಸಿ ಮಾತನಾಡಿದ ಅವರು ಒಳಮಿಸಲಾತಿ ಕೇವಲ ಮಾದಿಗ ಸಮುದಾಯಕ್ಕೆ 6% ಮತ್ತು ಚಲವಾದಿ ಸಮುದಾಯಕ್ಕೆ 5.5% ಮಿಸಲಾತಿ ನೀಡಲು ಶಿಪಾರಸು ಮಾಡಿದೆ ಎಂದು ತಪ್ಪಾಗಿ ಅರ್ಥೈಸುವದರ ಜೋತೆಗೆ ಸದಾಶಿವ ಆಯೋಗ ಅವೈಜ್ಞಾನಿಕ ಎನ್ನುವದು ಸತ್ಯಕ್ಕೆ ದೂರಾಗಿದೆ. ಆದರೆ ನೈಜವಾಗಿ ಪ.ಜಾ.ಯ ಮಾದಿಗ(ಎಡ) ಸಮುದಾಯ ಸೇರಿದಂತೆ ಸುಮಾರು 49 ಸಮುದಾಯಕ್ಕೆ 6% ಮತ್ತು ಚಲವಾದಿ(ಬಲ) ಸಮುದಾಯ ಸೇರಿದಂತೆ ಸುಮಾರು 42 ಸಮುದಾಯಗಳಿಗೆ 5.5% ಮಿಸಲಾತಿಯನ್ನು ಒದಗಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಶತಶತಮಾನಗಳಿಂದ ತುಳಿತಕ್ಕೊಳಗಾಗಿ ನ್ಯಾಯಯುತವಾಗಿ ದೊರಕಬೇಕಾದ ಸರಕಾರದ ಸೌಲಭ್ಯವನ್ನು ಪಡೆಯಲಾಗದೆ ವಂಚಿತರಾಗುತ್ತಿದ್ದ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯ ಸೇರಿದಂತೆ ಹಲವಾರು ಸಮುದಾಯದವರು ತಮ್ಮ ನ್ಯಾಯಕ್ಕಾಗಿ ನಿರಂತರ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದವು. ಹೋರಾಟದ ಫಲವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಗಿ ಪ.ಜಾ ಯಲ್ಲಿಯ ಎಲ್ಲ ಸಮಾಜಗಳವರ ಶೈಕ್ಷಣಿಕ, ಆರ್ಥಿಕ, ರಾಜಕೀಯ ವಸ್ತು ಸ್ಥಿತಿಯನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು ಆಡಳಿತ ಚುಕ್ಕಾಣಿ ಹಿಡಿದ ರಾಜ್ಯ ಸರಕಾರಗಳು ಒಳ ಮಿಸಲಾತಿ ಕುರಿತು ಒಲೈಕೆಯ ರಾಜಕಾರಣ ಮಾಡುತ್ತಾ ಬಂದಿದ್ದವು. ನಿಜವಾದ ತುಳಿತಕ್ಕೆ ಒಳಗಾದ ಸಮಾಜಕ್ಕೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಾ ಸಾಗಿದ್ದವು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಸದಾಶಿವ ಆಯೋಗದ ವರದಿಯನ್ನು ಸ್ವಿಕಾರಮಾಡಿ ಕೇಂದ್ರಕ್ಕೆ ಸಲ್ಲಿಸಿದ್ದು ಅಭಿನಂದನಾರ್ಹವಾಗಿದೆ. ಸಹಕರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ, ಚಲವಾದಿ ನಾರಾಯಣಸ್ವಾಮಿ, ನಳಿನಕುಮಾರ ಕಟೀಲು, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯ ಸಚಿವ ಸಂಪೂಟದ ಎಲ್ಲ ಸಚಿವರು ಹಾಗೂ ಸಂಘ ಪರಿವಾರದ ಹಿರಿಯರ ಸಹಕಾರಕ್ಕೆ ಮಾದಿಗ ಸಮುದಾಯದಿಂದ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಜಿ.ಎನ್.ಬೇವಿನಮರದ, ಶಿವಪುರ ಮೇತ್ರಿ, ರಮೇಶ ಸಾಲವಾಡಗಿ, ಗಂಗಾಧರ ಮ್ಯಾಗೇರಿ, ಅಶೋಕ ನಂದಿ, ಸಂಗಮೇಶ ದೊಡಮನಿ, ಸೋಮು ಬಿಸಿಲಕೊಪ್ಪ, ಮಲ್ಲಪ್ಪ ಹೆಬ್ಬಾಳ, ಬಸವರಾಜ ಅಪ್ಪನ್ನವರ, ಮಲ್ಲಪ್ಪ ಕೂಡಗಿ, ಪರಸಪ್ಪ ಮಾದರ ಸೇರಿದಂತೆ ಇತರರು ಇದ್ದರು.