ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕೊರಟಗೆರೆ, ಸೆ. ೧೬- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕು ಕಚೇರಿ ಎದುರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಚುನಾವಣೆ ಸಂದರ್ಭದಲ್ಲಿ ಮಾದಿಗ ಸಮುದಾಯದ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವುದಾಗಿ ಹೇಳಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇದರ ಬಗ್ಗೆ ಮಾತನಾಡದೆ ಉದಾಸೀನ ಮಾಡಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಮಾದಿಗ ಸಮುದಾಯದ ಒಗ್ಗಟ್ಟು ಪ್ರದರ್ಶಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಬೃಹತ್ ಹೋರಾಟ ರೂಪಿಸಿ ಸರ್ಕಾರಕ್ಕೆ ಪಾಠ ಕಲಿಸಲಾಗುವುದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅದಿಜಾಂಬವ ಅಭಿವೃದ್ಧಿ ಸೇವಾ ಸಂಘ ಜಿಲ್ಲಾ ಪ್ರಧಾನ ಸಂಚಾಲಕ ದಾಡಿ ವೆಂಕಟೇಶ್ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಪಂಚಪೀಠದ ನ್ಯಾಯಾಧೀಶರಾದ ಅರುಣ್‌ಮಿಶ್ರ ರವರು ಪರಶಿಷ್ಠ ಜಾತಿಯಲ್ಲಿ ಒಳಮೀಸಲಾತಿ ಅವಶ್ಯವಿದೆ ಹಾಗೂ ಅಯಾ ರಾಜ್ಯ ಸರ್ಕಾರಗಳು ಜಾರಿ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದರು.
ರಾಜ್ಯದಲ್ಲಿ ಪರಿಶಿಷ್ಠ ಜಾತಿಯಲ್ಲಿರುವ ೧೦೧ ಉಪಜಾತಿಗಳ ಜನಸಂಖ್ಯಾವಾರು ಒಳಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗ ಹಾಗೂ ಸಂಬಂದಿತ ಜಾತಿಗಳು ಎರಡು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಒಳಮೀಸಲಾತಿ ವರ್ಗೀಕರಣವಾಗದಿದ್ದರೆ ಅಂಚಿನಲ್ಲಿರುವ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅತಂಕ ವ್ಯಕ್ತಪಡಿಸಿದರು.
ದಲಿತ ಮುಖಂಡ ನರಸಿಂಹಮೂರ್ತಿ ಮಾತನಾಡಿ, ನ್ಯಾ. ಎ.ಜೆ.ಸದಾಶಿವ ಆಯೋಗ ವರದಿಯನ್ನು ಅನುಷ್ಠಾನ ಮಾಡುವುದರಲ್ಲಿ ರಾಜ್ಯ ಸರ್ಕಾರ ಮೀನಾ ಮೇಷ ಏಣಿಸುತ್ತಿದ್ದು, ಇದು ರಾಜಕೀಯದ ಒತ್ತಡದಿಂದ ಈ ವರದಿಯನ್ನು ಅನುಷ್ಠಾನ ಮಾಡದೇ ಬಹುಸಂಖ್ಯಾತರಾದ ಮಾದಿಗ ಸಮುದಾಯಕ್ಕೆ ಮಾಡಿದ ಮೋಸವಾಗಿದೆ. ಸರ್ವೋಚ್ಚ ನ್ಯಾಯಾಲಯದ ಪಂಚಪೀಠದ ನ್ಯಾಯಾಧೀಶರ ಅಭಿಪ್ರಾಯದ ಆಧಾರದ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಶಿವರಾಮ್ ಮಾತನಾಡಿ, ಮಾದಿಗ ಸಮಾಜದವರು ಮೀಸಲಾತಿ ಇದ್ದರೂ ಸಹ ಮೀಸಲಾತಿ ಅನುಕೂಲ ದಕ್ಕದೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸ್ವಾತಂತ್ರ್ಯ ಪೂರ್ವದಿಂದಲೂ ಇಂತಹ ಪರಿಸ್ಥಿತಿ ಮಾದಿಗ ಸುಮುದಾಯಕ್ಕೆಮೂಲಭೂತ ಹಕ್ಕುಗಳು ವಂಚನೆಯಾಗುತ್ತಿದೆ. ಅದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರ ಎಲ್ಲಾ ಪಕ್ಷದ ಶಾಸಕರು ಎ.ಜೆ.ಸದಾಶಿವ ಆಯೋಗ ವರದಿಯನ್ನು ಸ್ವೀಕರಿಸಿ ವಿಧಾನಸಭೆಯಲ್ಲಿ ಮಂಡಿಸಿ ಚರ್ಚಿಸಿ ಶಾಸನ ಸಭೆಯಲ್ಲಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ.ಪಂ. ಸದಸ್ಯ ನಟರಾಜು, ದಲಿತ ಪರ ಸಂಘಟನೆ ಒಕ್ಕೂಟಗಳ ಅಧ್ಯಕ್ಷರಾದ ಆನಂದ್‌ಕುಮಾರ್, ಲಕ್ಷ್ಮಿನರಸಯ್ಯ, ಸುರೇಶ್, ಗಂಗರಾಜು, ನರಸಿಂಹಮೂರ್ತಿ, ಜಟ್ಟಿಅಗ್ರಹಾರ ನಾಗರಾಜು, ಚಿಕ್ಕಹನುಮಯ್ಯ, ದೊಡ್ಡಯ್ಯ, ಜಯರಾಮ್, ನರಸಿಂಹಮೂರ್ತಿ, ಭೀಮರಾಜು, ಚಿಕ್ಕಪ್ಪಯ್ಯ, ಶಿವರಾಮ್, ಸುಬ್ಬರಾಯಪ್ಪ, ಹನುಮಂತರಾಜು, ಗೋಪಿ, ಮಂಜು, ಕೇಬಲ್ ಸಿದ್ದಗಂಗಪ್ಪ, ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.