ನ್ಯಾ.ರಮಣ ಸುಪ್ರೀಂ ಸಿಜೆ

ನವದೆಹಲಿ,ಏ.೨೪- ಸುಪ್ರೀಂಕೋರ್ಟ್‌ನ ೪೮ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಮಣ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಉಪಾರಾಷ್ಟ್ರಪತಿ ಡಾ. ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಉಪಸ್ಥಿತರಿದ್ದರು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಎ ಬೋಬ್ಡೆ ನಿನ್ನೆಯಷ್ಟೇ ನಿವೃತ್ತಿಗೊಂಡ ಬಳಿಕ ಈ ಮಹತ್ವದ ಹುದ್ದೆಯನ್ನು ೬೩ ವರ್ಷದ ನ್ಯಾಯಮೂರ್ತಿ ಎನ್.ವಿ ರಮಣ ಅವರು ತುಂಬಿದ್ದಾರೆ. ನ್ಯಾಯಮೂರ್ತಿ ರಮಣಾ ಅವರ ಸೇವಾವಧಿ ೨೦೨೨ ಆ.೨೬ರವರೆಗೂ ಇರಲಿದೆ.
೧೯೫೭ ಆ. ೨೭ ರಂದು ಜನಿಸಿದ ರಮಣ ಅವರು, ೨೦೦೦ ಇಸವಿಯ ಜೂನ್‌ನಲ್ಲಿ ಆಂಧ್ರಪ್ರದೇಶದ ಹೈಕೋರ್ಟ್‌ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಆನಂತರ ದೆಹಲಿ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿಯೂ ಕಾರ್ಯನಿರ್ವಹಿಸಿದ್ದರು. ೨೦೧೪ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ರಮಣ ಅವರನ್ನು ನೇಮಕ ಮಾಡಲಾಗಿತ್ತು.
ಈಗ ತೆಲುಗು ಭಾಷಿಕರೊಬ್ಬರಿಗೆ ಅತ್ಯುನ್ನತ ಹುದ್ದೆಯಾದ ಮುಖ್ಯನ್ಯಾಯಮೂರ್ತಿ ಹುದ್ದೆ ಪ್ರಾಪ್ತವಾದಂತಾಗಿದೆ. ಇದರೊಂದಿಗೆ ಆಂಧ್ರ ಮೂಲದ ವ್ಯಕ್ತಿಯೊಬ್ಬರಿಗೆ ೨ನೇ ಬಾರಿಗೆ ಈ ಉನ್ನತ ಹುದ್ದೆ ಒಲಿದು ಬಂದಿದೆ.