
ಹುಬ್ಬಳ್ಳಿ,ಮಾ.18: ಮಾದಿಗ ಸಮುದಾಯಕ್ಕೆ ಜನ ಸಂಖ್ಯಾಧಾರಿತ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ನ್ಯಾ.ಎ.ಜೆ. ಸದಾಶಿವ ವರದಿಯನ್ನು ಜಾರಿ ಮಾಡಬೇಕು ಎಂದು ಕರ್ನಾಟಕ ಮಾದಿಗ ದಂಡೋರದ ರಾಜ್ಯ ಕಾರ್ಯದರ್ಶಿ ಗಂಗಾಧರ ಪೆರೂರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಇಲ್ಲದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಪರಿಶಿಷ್ಟ ಜಾತಿಯ ಶೇ 80 ರಷ್ಟು ಚಲವಾದಿ ಮತ್ತು ಮಾದಿಗ ಸಮುದಾಯದ ಮತದಾರರು ಮತ ಚಲಾಯಿಸದಂತೆ ಸಮುದಾಯಕ್ಕೆ ಒತ್ತಾಯ ಹೇರಲಾಗುವುದು ಎಂದರು.
ಬಿಜೆಪಿ ಪಕ್ಷದಲ್ಲಿರುವ ಕಾರ್ಯಕರ್ತರು ಮತ್ತು ನಾಯಕರುಗಳು ಸಾಮೂಹಿಕ ರಾಜಿನಾಮೆ ನೀಡಲು ಒತ್ತಾಯಿಸಿದ್ದೇವೆ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಚುನಾವಣೆಯಲ್ಲಿ ಸಮುದಾಯದ ಕೇರಿಗಳಿಗೆ ನಾಯಕರುಗಳು ಮತ್ತು ಕಾರ್ಯಕರ್ತರು ಪ್ರವೇಶಿಸದಂತೆ ತಡೆಯೊಡ್ಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ ಅನಂತಪುರ, ಪ್ರಕಾಶ ಬಾರಗೇರ, ಶ್ರೀನಿವಾಸ ರಟ್ಟಿ, ಹನುಮಂತ ಯರಗುಂಟಿ, ರಾಮಕೃಷ್ಣ, ವಿಜಯಕರ ಉಪಸ್ಥಿತರಿದ್ದರು.