ನ್ಯಾ.ಎನ್ ವಿ ರಮಣ ವಿರುದ್ದ ಆರೋಪ: ಸುಪ್ರೀಂ ನಿರಾಕರಣೆ

ನವದೆಹಲಿ, ಮಾ.24- ಆಂಧ್ರಪ್ರದೇಶದ ಚುನಾಯಿತ ಸರ್ಕಾರದ ವಿರುದ್ಧ ನ್ಯಾಯಮೂರ್ತಿ ಎನ್. ವಿ ರಮಣ ಕೆಲಸ ಮಾಡುತ್ತಿದ್ದಾರೆ ಎನ್ನುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆರೋಪವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ನ್ಯಾಯಮೂರ್ತಿ ಎನ್. ವಿ ರಮಣ ಅವರು ತೆಲುಗುದೇಶಂ ಪಕ್ಷದ ಪರವಾಗಿ ವಕಾಲತ್ತು ವಹಿಸುವ ಮೂಲಕ ಆಂಧ್ರಪ್ರದೇಶದ ಚುನಾಯಿತ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆರೋಪ ಮಾಡಿದ್ದರು.

ನ್ಯಾಯಮೂರ್ತಿ ಎನ್. ವಿ ರಮಣ ಅವರನ್ನು ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಾದೀಶರನ್ನಾಗಿ ಶಿಫಾರಸ್ಸು ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಎನ್.ವಿ ರಮಣ ವಿರುದ್ಧದ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಏಪ್ರಿಲ್ 23ರಂದು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅವರು ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಳಿಬಂದಿರುವ ಆರೋಪವನ್ನು ಸುಪ್ರೀಂಕೋರ್ಟ್ ಸಾರಸಗಟಾಗಿ ತಳ್ಳಿಹಾಕಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು 2020ರ ಅಕ್ಟೋಬರ್ 6ರಂದು ಸುಪ್ರೀಂಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಯಾಗಿರುವ ರಮಣ ವಿರುದ್ಧ ಚುನಾಯಿತ ಸರ್ಕಾರ ಅಲುಗಾಡಿಸುವ ಪ್ರಯತ್ನ ಮಾಡುವ ಕೆಲಸಕ್ಕೆ ವಿರೋಧಪಕ್ಷದ ನಾಯಕ ಚಂದ್ರಬಾಬು ನಾಯ್ಡು ಜೊತೆ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆರೋಪ ಮಾಡಿದ್ದರು.

ಈ ನೆಲೆಯಲ್ಲಿ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಸುಪ್ರೀಂಕೋರ್ಟ್ ಆಂಧ್ರಪ್ರದೇಶದ ಮುಖ್ಯಮಂತ್ರಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ನ್ಯಾಯಾಲಯದ ಕೆಲವು ವಿಷಯಗಳು ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಿದೆ ಹೀಗಾಗಿ ಅದನ್ನು ಸಾರ್ವಜನಿಕ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.