ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ವಿಚಾರಣೆ ಅಂತ್ಯ: ಹೊಸ ಸಮನ್ಸ್ ಇಲ್ಲ

ನವದೆಹಲಿ, ಜು.27-ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಕುರಿತಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಇಂದು ಮೂರು ಗಂಟೆಗಳ ವಿಚಾರಣೆ ನಡೆಸಿತು.
ಸದ್ಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾರಿಗೆ ಯಾವುದೇ ಹೊಸ ಸಮನ್ಸ್ ಜಾರಿಗೊಳಿಸಿಲ್ಲ. ಇದರಿಂದಾಗಿ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸತತ ಮೂರನೇ ದಿನವಾದ ಇಂದು ಪುತ್ರಿ ಪ್ರಿಯಾಂಕಾ ಗಾಂಧಿಯವರ ಜತೆ ಸೋನಿಯಾ ಅವರು ವಿಚಾರಣೆ ಹಾಜರಾದರು. ಒಟ್ಟು ಮೂರು‌ ದಿನಗಳ ಕಾಲ ವಿಚಾರಣೆಯಲ್ಲಿ 12 ಗಂಟೆಗಳ ಕಾಲ ಇಡಿ ಅಧಿಕಾರಿಗಳು 100 ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಮೂರು ತಾಸುಗಳ ನಡೆಡ ವಿಚಾರಣೆಯಲ್ಲಿ ಸೋನಿಯಾ ಅವರಿಗೆ ಇಡಿ ಅಧಿಕಾರಿಗಳು ಯಾವುದೇ ಸಮನ್ಸ್ ಜಾರಿ ಮಾಡಿಲ್ಲ.
ಸೋನಿಯಾ ಅವರಿಗೆ ಔಷಧಿ ಹಾಗೂ ಮಾತ್ರೆಗಳನ್ನು ನೀಡಬೇಕಾಗಿದ್ದರಿಂದ ಪ್ರಿಯಾಂಕ ಅವರು ಇಡಿ ಕಚೇರಿಯ ಮತ್ತೊಂದು ಕೋಣೆಯಲ್ಲಿದ್ದರು.
ಸೋನಿಯಾಗಾಂಧಿ ಅವರನ್ನು ವಿಚಾರಣೆಗೆ ಗುರಿಪಡಿಸಿರುವುದನ್ನು ಖಂಡಿಸಿ ಇಂದೂ ಕೂಡ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಾಗೂ ಯಂಗ್ ಇಂಡಿಯಾ ಕಂಪನಿಯಲ್ಲಿ ಸೋನಿಯಾರ ಪಾತ್ರ ಕುರಿತು ಇ.ಡಿ.ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.
ಈ ಮೊದಲು ರಾಹುಲ್ ಗಾಂಧಿಯವರನ್ನು ಐದು ಬಾರಿ ವಿಚಾರಣೆ ನಡೆಸಲಾಗಿತ್ತು.