ನ್ಯಾಷನಲ್ ಹೆರಾಲ್ಡ್: ಕಾಂಗ್ರೆಸ್ ಸಂಸದರ ಸಭೆ

ನವದೆಹಲಿ, ಆ.೪- ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆರಾಲ್ಡ್ ಹೌಸ್ ಜಾರಿ ನಿರ್ದೇಶನಾಲಯ ಬೀಗ ಹಾಕಿದೆ, ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷ ಎಲ್ಲಾ ಸಂಸದರ ಸಭೆ ಕರೆದಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು ಪಕ್ಷದ ವತಿಯಿಂದ ಮುಂದಿನ ಹೋರಾಟದ ರೂಪರೇಷೆ ಸಿದ್ದಪಡಿಸಲು ಮುಂದಾಗಿದ್ದಾರೆ.
ಪ್ರಧಾನಿ ನರಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತ ಪಕ್ಷ, ಕಾಂಗ್ರೆಸ್ ಪಕ್ಷದ ನಾಯಕರನ್ನು “ಭಯೋತ್ಪಾದಕರು” ಎಂದು ಪರಿಗಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಧ್ವನಿ ಅಡಗಿಸಲು ಸಾಧ್ಯವಿಲ್ಲ:
ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ನಾಯಕತ್ವದ ವಿರುದ್ಧ ಬುದ್ದಿಹೀನವಾಗಿ ತನಿಖಾ ಸಂಸ್ಥೆ ಛೂ ಬಿಟ್ಟಿರುವುದನ್ನು ಇಡೀ ದೇಶದ ಗಮನಿಸುತ್ತಿದೆ. ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷದ ನಿಘಂಟಿನಲ್ಲಿ ‘ಭಯ’ ಎಂಬ ಪದವಿಲ್ಲ, ಇಂತಹ “ಅಗ್ಗದ ತಂತ್ರಗಳಿಂದ” ಪಕ್ಷದ ನಾಯಕತ್ವದ ಧ್ವನಿ ಮೌನಗೊಳಿಸಲಾಗುವುದಿಲ್ಲ ಎಂದು ಕೇಂದ್ರದ ವಿರುದ್ದ ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿವಾಸಗಳನ್ನು “ಭಯೋತ್ಪಾದಕರ” ರೀತಿ ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ಆರೋಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದ ಕೆಲವೇ ದಿನಗಳಲ್ಲಿ ಇಲ್ಲಿನ ಹೆರಾಲ್ಡ್ ಹೌಸ್‌ನಲ್ಲಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಕಚೇರಿಗೆ ಜಾರಿ ನಿರ್ದೇಶನಾಲಯ ಬೀಗ ಹಾಕಿದೆ.