ನ್ಯಾಯ ಸಮ್ಮತ ಚುನಾವಣೆ ನಡೆಸಲು ಸೂಚನೆ

ತುಮಕೂರು, ನ. ೨೭- ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ಯಾವುದೇ ಲೋಪವಿಲ್ಲದಂತೆ ನಡೆಸಬೇಕು ಎಂದು ಚುನಾವಣಾ ವೀಕ್ಷಕ ಡಾ. ರವಿಕುಮಾರ್ ಸುರಪುರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆಯನ್ನು ವೀಕ್ಷಿಸಲು ಮೊದಲ ಬಾರಿ ಭೇಟಿ ನೀಡಿ ಜಿಲ್ಲಾಡಳಿತದಿಂದ ಕೈಗೊಂಡಿರುವ ಚುನಾವಣೆ ಸಿದ್ಧತೆ, ಮತಗಟ್ಟೆಗಳ ಸ್ಥಾಪನೆ, ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿ ಮತ್ತಿತರ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಡಿಸೆಂಬರ್ ೧೦ ರಂದು ಚುನಾವಣೆ ನಡೆಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಅಜಯ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.