ನ್ಯಾಯ ಕೇಳಲು ವಿಷ ಕುಡಿದು ಬಂದ ಬಸ್ ಕಂಡೆಕ್ಟರ್…

ಪುತ್ತೂರು, ಜ.೧೨- ನ್ಯಾಯ ಕೊಡಿಸುವಂತೆ ಅಹವಾಲು ಹಿಡಿದುಕೊಂಡು ಮೇಲಾಧಿಕಾರಿಯವರ ಬಳಿಗೆ ಬಂದ ಬಸ್ ನಿರ್ವಾಹಕರೊಬ್ಬರು ವಿಷ ಸೇವಿಸಿದ ಪರಿಣಾಮ ಅಸ್ವಸ್ಥಗೊಂಡ ಸೋಮವಾರ ಘಟನೆ ನಡೆದಿದೆ.
ಕೆಎಸ್ಸಾರ್ಟಿಸಿ ಬಿ.ಸಿ. ರೋಡು ಘಟಕದ ಬಸ್ ನಿರ್ವಾಹಕ ನಾಗೇಶ್ (೫೭) ಅವರು ತನಗೆ ಘಟಕದಲ್ಲಿ ಕರ್ತವ್ಯ ಮಾಡಲು ಕಿರುಕುಳ ನೀಡಲಾಗುತ್ತಿದೆ. ತನಗೆ ನ್ಯಾಯ ಕೊಡಿಸಬೇಕು ಎಂದು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಕಚೇರಿಗೆ ಬಂದಿದ್ದರು. ನ್ಯಾಯಕ್ಕಾಗಿ ಬೇಡಿ ಬರುವಾಗಲೇ ವಿಷ ಸೇವಿಸಿ ಬಂದಿದ್ದ ನಾಗೇಶ್ ಕಚೇರಿಯಲ್ಲಿಯೇ ಅಸ್ವಸ್ತಗೊಂಡರು. ಕೂಡಲೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈನೆಡ್ ಮೋಹನನ ಸಹೋದರ
ಆತ್ಮಹತ್ಯೆಗೆ ಪ್ರಯತ್ನಿಸಿದ ಈತ ಸೈನೆಡ್ ಕಿಲ್ಲರ್ ಮೋಹನನ ಸಹೋದರನಾಗಿದ್ದು, ಈ ಹಿಂದೆ ಘಟಕದಲ್ಲಿ ಕಿರುಕುಳ ಆಗುತ್ತಿರುವ ಬಗ್ಗೆ ಯಾವುದೇ ದೂರು ನೀಡಿಲ್ಲ. ಆದರೆ ಸೋಮವಾರ ದೂರು ನೀಡಲು ಬರುವಾಗಲೇ ವಿಷ ಸೇವನೆ ಮಾಡಿ ಬಂದಿದ್ದರು. ಕಂಡೆಕ್ಟರ್ ನಾಗೇಶ್ ಅವರು ಮೌಖಿಕವಾಗಿ ನೀಡಿದ ದೂರನ್ನು ತನಿಖೆ ಮಾಡಲಾಗುವುದು ಎಂದು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.