ನ್ಯಾಯಾಲಯಗಳ ಕಲಾಪ ಸೀಮಿತಗೊಳಿಸಿ ಹೈಕೋರ್ಟ್ ಆದೇಶ

ಬೆಂಗಳೂರು,ಏ.24-ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಕಲಾಪನ್ನು ಸೀಮಿತಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಮೊದಲು ಒಂದು ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳಿದ್ದ 9 ಜಿಲ್ಲೆಗಳ ನ್ಯಾಯಾಲಯಗಳಿಗೆ ಸೀಮಿತ ಕಲಾಪ ನಿಯಮಗಳನ್ನು ಅನ್ವಯಿಸಿ ಆದೇಶ ಹೊರಡಿಸಲಾಗಿತ್ತು.
ಇದೀಗ ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳಿರುವ 16 ಜಿಲ್ಲೆಗಳಿಗೆ ಈ ನಿಯಮಗಳನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಈ 16 ಜಿಲ್ಲೆಗಳಲ್ಲಿ ನ್ಯಾಯಾಲಯಗಳು ಮೇ 22ರವರೆಗೆ ಸೀಮಿತ ಅವಧಿಗೆ ಕಾರ್ಯನಿರ್ವಹಿಸಲಿವೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರವೇ ಕೋರ್ಟ್ ಕಲಾಪಗಳು ನಡೆಯಲಿದ್ದು, ಯಾವುದೇ ಸಾಕ್ಷ್ಯಗಳ ವಿಚಾರಣೆ ನಡೆಸುವಂತಿಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳಿರುವ ಪ್ರಕರಣಗಳಲ್ಲಿ ಮಾತ್ರ ಸಾಕ್ಷಿ ವಿಚಾರಣೆ ನಡೆಸಬೇಕು. ಕೋರ್ಟ್​ಗಳಿಗೆ ಕಕ್ಷಿದಾರರು ಬರುವಂತಿಲ್ಲ ಎಂದು ಆದೇಶಿಸಿದೆ.
ಅಲ್ಲದೆ ಯಾವುದೇ ರೀತಿಯಲ್ಲೂ ವ್ಯತಿರಿಕ್ತ ಆದೇಶಗಳನ್ನು ನೀಡಬಾರದು ಎಂದು ಆದೇಶಿಸಲಾಗಿದೆ. ಎಲ್ಲಾ ನ್ಯಾಯಾಂಗ ಸಿಬ್ಬಂದಿ ಏಪ್ರಿಲ್ ಅಂತ್ಯದೊಳಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.