ನ್ಯಾಯಾಧೀಶರ ಮೇಲೆ ದಾಳಿ ಸಿಜೆ ಕಳವಳ

ನವದೆಹಲಿ,ಜು.೨೩- ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರ ಮೇಲೆ ದಾಳಿಗಳು ನಡೆಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಧ್ಯಮಗಳು ನಿರ್ವಹಿಸುವ ಪಾತ್ರದ ವಿರುದ್ಧವೂ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿಂದು ನ್ಯಾಯಾಧೀಶರ ಜೀವನ ಕುರಿತು ನ್ಯಾಯಾಧೀಶ ಎಸ್.ಬಿ ಸಿನ್ಹಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರ ಮೇಲೆ ದೈಹಿಕ ಹಲ್ಲೆಗಳು ಹೆಚ್ಚಾಗುತ್ತಿವೆ ಎಂದರು.
ನ್ಯಾಯಾಧೀಶರು ಯಾವುದೇ ಭದ್ರತೆ ಅಥವಾ ಸುರಕ್ಷತೆ ಇಲ್ಲದೆ ಸುರಕ್ಷತೆಯ ಭರವಸೆ ಇಲ್ಲದೆ ನ್ಯಾಯಾಧೀಶರು ಶಿಕ್ಷೆಗೊಳಗಾದ ಜನರಂತೆ ಅದೇ ಸಮಾಜದಲ್ಲಿ ಬದುಕಬೇಕಾಗಿದೆ ಎಂದು ಹೇಳಿದರು.
ಮಾಧ್ಯಮ ಪ್ರಸಾರದ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ಮಾಧ್ಯಮಗಳು ಕಾಂಗರು ನ್ಯಾಯಾಲಯಗಳನ್ನು ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವೊಂದು ಸಲ ಅನುಭವಿ ನ್ಯಾಯಾಧೀಶರು ಕೂಡ ಸಮಸ್ಯೆಗಳ ಬಗ್ಗೆ ನಿರ್ಧರಿಸಲು ಕಷ್ಟವಾಗುತ್ತಿದೆ.
ನ್ಯಾಯ ವಿಲೇವಾರಿ ವಿಷಯಗಳ ಬಗ್ಗೆ ಮತ್ತು ಕಾರ್ಯಸೂಚಿ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕವಾಗಿರುವುದು ಸಾಬೀತಾಗಿದೆ ಎಂದರು. ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಉದ್ಯೋಗದ ಸೂಕ್ಷ್ಮತೆಯಿಂದಾಗಿ ನಿವೃತ್ತಿ ನಂತರವೂ ಭದ್ರತೆ ಒದಗಿಸುತ್ತಾರೆ. ಆದರೆ, ನ್ಯಾಯಾಧೀಶರಿಗೂ ಈ ರೀತಿಯ ರಕ್ಷಣೆ ನೀಡದಿರುವುದು ವಿಪರ್ಯಾಸ ಎಂದು ಅವರು ಹೇಳಿದರು.