ನ್ಯಾಯಾಧೀಶರ ನೇಮಕಾತಿ ಶಿಫಾರಸ್ಸಿಗೆ ಸಮಯದ ಚೌಕಟ್ಟು ಅಗತ್ಯ: ಸುಪ್ರೀಂ

ನವದೆಹಲಿ,ಏ.೧೬- ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕೊಲಿಜಿಯಂ ಮಾಡಿದ ಶಿಫಾರಸ್ಸುಗಳಿಗೆ ಸ್ಪಂದಿಸಲು ಸಮಯದ ಚೌಕಟ್ಟನ್ನು ನಿಗದಿಪಡಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಈ ಸಂಬಂಧ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಸಮಯದ ಬಗ್ಗೆ ಕೇಂದ್ರ ಸರ್ಕಾರ ವಿವರ ನೀಡಬೇಕು ಎಂದು ಹೇಳಿದೆ.
ಹೈಕೋರ್ಟ್ ನ್ಯಾಯಾಧೀಶರ ನೇಮಕ ಸಂಬಂಧ ಕೊಲಿಜಿಯಂ ಶಿಫಾರಸ್ಸು ಮಾಡಿದ ನಂತರ ಇನ್ನು ಬಾಕಿ ಇರುವ ೧೦ ಹೆಸರುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿತು.
ಕೊಲ್ಕತ್ತ, ದೆಹಲಿ, ಜಮ್ಮು ಮತ್ತು ಕಾಶ್ಮೀರದ ಹುದ್ದೆಗಳು ಖಾಲಿ ಇರುವ ಪಟ್ಟಿಯಲ್ಲಿ ಸೇರಿವೆ.
ಈ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ, ನ್ಯಾಯಾಧೀಶರಾದ ಎಸ್.ಕೆ ಕೌಲ್ ಹಾಗೂ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠದ ಮುಂದೆ ನಡೆಯಿತು.
ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಎಂ.ಕೆ ವೇಣುಗೋಪಾಲ್ ಹಾಜರಾಗಿ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕ ಸಂಬಂಧ ಕೊಲಿಜಿಯಂ ಮಾಡಿರುವ ಶಿಫಾರಸ್ಸುಗಳನ್ನು ೩ ತಿಂಗಳ ಒಳಗೆ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಪೀಠ ಪ್ರತಿಕ್ರಿಯಿಸಿ ನಾವು ಯಾವುದೇ ನ್ಯಾಯಾಂಗ ನೇಮಕಾತಿಗಳನ್ನು ಪರಾಮರ್ಶೆ ನಡೆಸುತ್ತಿಲ್ಲ. ಆದರೆ. ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಕೊಲಿಜಿಯಂ ಮಾಡಿರುವ ಶಿಫಾರಸ್ಸುಗಳಿಗೆ ಪ್ರತಿಕ್ರಿಯಿಸಲು ಸಮಯದ ಚೌಕಟ್ಟು ಅಗತ್ಯವಾಗಿದೆ ಎಂದು ಪ್ರತಿಪಾದಿಸಿತು.
ಒಡಿಶಾ ವಕೀಲರು ಮುಷ್ಕರ ನಡೆಸಿದ್ದ ಪ್ರಕರಣದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ನ್ಯಾಯಾಧೀಶರ ನೇಮಕ ವಿಳಂಬದ ಬಗ್ಗೆ ಪ್ರಸ್ತಾಪಿಸಿತು.