ನ್ಯಾಯಾಧೀಶರು ಸರ್ವಜ್ಞರಲ್ಲ ಹೇಳಿಕೆ- ರವಿ ಸ್ಪಷ್ಟನೆ

ಬೆಂಗಳೂರು, ಮೇ ೧೪- ನ್ಯಾಯಾಧೀಶರೇನೂ ಸರ್ವಜ್ಞರಲ್ಲ ಅವರೂ ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ನಿರ್ದೇಶನ ನೀಡುತ್ತಾರೆ ಎಂದು ನಾನು ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ್ದೆ. ಇದರಲ್ಲಿ ತಪ್ಪೇನು, ಮೊಸರಲ್ಲಿ ಕಲ್ಲು ಹುಡುಕುವ ಮನೋಭಾವದವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನ್ಯಾಯಾಧೀಶರ ಕುರಿತ ತಮ್ಮ ಹೇಳಿಕೆಗೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ. ನಮಗೆ ಸದಾ ಗೌರವವಿದೆ. ಯಾವ ಪಕ್ಷ ನ್ಯಾಯಾಲಯದ ತೀರ್ಪಿನ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸ್ವಾತಂತ್ರ ಹರಣ ಮಾಡಿತ್ತೋ ಅದೇ ಪಕ್ಷ ಇಂದು ಏಕ್‌ಧಮ್ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಯಾವ ಕಾಂಗ್ರೆಸ್ ಪಕ್ಷ ನ್ಯಾಯಾಲಯಗಳು ಮೋದಿ ಆಲಯಗಳಾಗಿವೆ ಎಂದು ಆರೋಪಿಸಿ ಸಿಎಎ ರಾಮಮಂದಿರ ತೀರ್ಪಿನ ವಿರುದ್ಧ ಅಪಪ್ರಚಾರ ಮಾಡಿತ್ತೋ ಅದು ಈಗ ನ್ಯಾಯಾಲಯದ ಪರವಾಗಿ ಗೌರವ ವ್ಯಕ್ತಪಡಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಏನಂತೀರಾ ಸಿದ್ದರಾಮಯ್ಯ, ದಿನೇಶ್‌ಗುಂಡೂರಾವ್ ಅವರೇ ಎಂದು ವ್ಯಂಗ್ಯವಾಡಿದ್ದಾರೆ.
ದುರಾಂಹಕಾರಿ ಯಾರೆಂಬುದು ಸಿದ್ದರಾಮಯ್ಯ ಅವರ ಹಾವ-ಭಾವಗಳೇ ಹೇಳುತ್ತವೆ. ಹರಿಕಾರ ಮದದಿಂದ ಮೆರೆದವರು ಯಾರೆಂಬುದೂ ರಾಜ್ಯಕ್ಕೆ ಗೊತ್ತಿದೆ. ಮಾನವೀಯ ಕಳಕಳಿ ಇದ್ದವರೂ ಓಟಿಗಾಗಿ ಕೊಲೆಗಡುಕರನ್ನು ಬೆಂಬಲಿಸುವ ಹೀನ ರಾಜಕಾರಣ ಮಾಡುವುದಿಲ್ಲ. ತಮ್ಮದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ ಎಂದು ಸಿ.ಟಿ. ರವಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.