ನ್ಯಾಯಾಧೀಶರಿಗೆ ಆತ್ಮೀಯ ಬೀಳ್ಕೋಡುಗೆ

ದಾವಣಗೆರೆ,ಡಿ. 27;-ಬದ್ಧತೆಯಿಂದ ಕೆಲಸ ಮಾಡುವುದು ಶೀಘ್ರ ನ್ಯಾಯದಾನ ಮಾಡುವುದು, ನ್ಯಾಯಾಧೀಶರು ಮಾಡಬೇಕಾದ ಪ್ರಮುಖ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಾಬಪ್ಪ ತಿಳಿಸಿದರು.ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡ ಅವರನ್ನು ದಾವಣಗೆರೆ ಜಿಲ್ಲಾ ಸೇವಾ ಪ್ರಾಧಿಕಾರದಿಂದ ಪ್ಯಾನಲ್ ವಕೀಲರು ನೀಡಿದ ಬೀಳ್ಕೊಡುಗೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.ವಕೀಲರು ಮತ್ತು ನ್ಯಾಯಾಧೀಶರು ನ್ಯಾಯದಾನ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ. ನ್ಯಾಯಾಧೀಶರು ಪೂರ್ವಭಾವಿಯಾಗಿ ತಮ್ಮ ಕೇಸುಗಳನ್ನು ಓದಿಕೊಂಡು ಬಂದಾಗ ಮಾತ್ರ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.ದಾವಣಗೆರೆಯಲ್ಲಿ ಎಲ್ಲಾ ವಕೀಲರ ಸಹಕಾರದಿಂದ ನ್ಯಾಯಾಧೀಶರಾಗಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್‌ಕುಮಾರ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕರ್ತವ್ಯ ನಿರ್ವಹಿಸುವ ನ್ಯಾಯಾಧೀಶರ ಸಂಖ್ಯೆ ಬಹಳ ಕಡಿಮೆ. ಅಂಥವರಲ್ಲಿ ನ್ಯಾಯಾಧೀಶರಾದ ಸಾಬಪ್ಪ ಅವರು ಕಲ್ಯಾಣ ಸಮಾಜದ ಆದರ್ಶವನ್ನು ಇಟ್ಟುಕೊಂಡು ದುರ್ಬಲರ, ಬಡವರ ಬಗ್ಗೆ ಬಹಳ ಕಾಳಜಿಯನ್ನು ಇಟ್ಟುಕೊಂಡು ನ್ಯಾಯಾಧೀಶರಾಗಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ಯಾನಲ್ ವಕೀಲರಾದ ಆಂಜನೇಯ ಗುರೂಜಿ, ಮಂಜುಳ, ಪ್ರದೀಪ್, ಭಾಗ್ಯಮ್ಮ, ರೇಖಾ, ನ್ಯಾಯವಾದಿ ನಜೀರ್ ಅಹ್ಮದ್ ಮುಂತಾದವರು ಸಾಬಪ್ಪನವರ ಕಾರ್ಯವೈಖರಿಯನ್ನು ಕುರಿತು ಪ್ರಶಂಸಿಸಿದರು.