ನ್ಯಾಯಾಂಗ ವ್ಯವಸ್ಥೆಯ ಸಫಲತೆಯಲ್ಲಿ ವಕೀಲರ ಪಾತ್ರ ಅನನ್ಯ

ಕಲಬುರಗಿ:ಡಿ.3: ವ್ಯಕ್ತಿಯು ತಪ್ಪು ಮಾಡಿದರೆ ನ್ಯಾಯಾಂಗದ ಅಡಿಯಲ್ಲಿ ಶಿಕ್ಷೆ, ಆತನಿಗೆ ಅನ್ಯಾಯವಾಗಿದ್ದರೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ವಕೀಲರು ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಮತ್ತು ಅದರ ಸಫಲತೆಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿದ್ದು, ಅದನ್ನು ಯಶಸ್ವಿಯಾಗಿ ಮಾಡುವ ಮೂಲಕ ಮಾದರಿ ವಕೀಲರಾಗೋಣ ಎಂದು ವಕೀಲ, ಸಾಮಾಜಿಕ ಹೋರಾಟಗಾರ ಡಾ.ಸುನೀಲಕುಮಾರ ಎಚ್.ವಂಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾ ಮಂದಿರ’ ಪ್ರೌಢಶಾಲೆಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ವಕೀಲರ ದಿನಾಚರಣೆ’ಯ ಕಾರ್ಯಕ್ರಮವನ್ನು ಡಾ.ಬಾಬು ರಾಜೇಂದ್ರ ಪ್ರಸಾದ್‍ರ ಭಾವಚಿತ್ರಕ್ಕೆ ಪುಷ್ಪ ನಮಗಳನ್ನು ಸಲ್ಲಿಸಿ, ನಂತರ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ವಕೀಲರು ಎಲ್ಲಾ ಸಂದರ್ಭಗಳಲ್ಲಿ ಹಣಕ್ಕೆ ಮಹತ್ವ ನೀಡದೆ, ಬಡವರು, ಅಸಹಾಯಕರಿಗೆ ನ್ಯಾಯವನ್ನು ಒದಗಿಸಿಕೊಡುವ ಮೂಲಕ ಮಾನವೀಯತೆ ಮೆರೆಯೋಣ. ಮಹಾತ್ಮ ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಡಾ.ಬಾಬು ರಾಜೇಂದ್ರ ಪ್ರಸಾದ, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು ಅವರಂತಹ ಅಪಾರವಾದ ಕಾನೂನು ಜ್ಞಾನ ಪಡೆಯಲು ನಿರಂತರವಾಗಿ ಅಧ್ಯಯನಶೀಲರಾಗಬೇಕು. ವಕೀಲ ವೃತಿಯ ಜೊತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ಬುದ್ಧ-ಬಸವ-ಡಾ.ಬಾಬಾಸಾಹೇಬ್ ಅಂಬೇಡ್ಕರ್ ತತ್ವ ನಮ್ಮ ಕಾನೂನುಗಳಿಗೆ ಆಧಾರವಾಗಿವೆ ಎಂದು ಅನೇಕ ದೃಷ್ಠಾಂತಗಳೊಂದಿಗೆ ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜದಲ್ಲಿರುವ ಅಶಕ್ತ ವರ್ಗದವರಿಗೆ ಉಚಿತ ಕಾನೂನು ದೊರೆಯಬೇಕೆಂಬ ಉದ್ದೇಶದಿಂದ ಲಭ್ಯವಿರುವ ಕಾಯ್ದೆ-ಕಾನೂನಗಳ ಬಗ್ಗೆ ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಜರುಗುತ್ತಿದ್ದು ಶ್ಲಾಘನೀಯವಾಗಿದೆ. ಡಾ.ಬಾಬು ರಾಜೇಂದ್ರ ಪ್ರಸಾದ್‍ರ ಜನ್ಮದಿನಾಚರಣೆಯನ್ನು ‘ರಾಷ್ಟ್ರೀಯ ವಕೀಲರ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಅವರು ಶ್ರೇಷ್ಠ ನ್ಯಾಯವಾದಿಗಳಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಮತ್ತು ದೇಶದ ರಾಷ್ಟ್ರಪತಿಯಾಗಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಪ್ರಮುಖರಾದ ಬಸವರಾಜ ಹೆಳವರ ಯಾಳಗಿ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಸ್ಲಾಂ ಶೇಖ್, ಇರ್ಫಾನ್ ಶೇಖ್, ರೊಹೀತ್ ಏರ್ಪೂಲ್, ಪ್ರೀತಿ ಬಿರಾದಾರ, ಪೂರ್ಣಿಮಾ ಪಾಟೀಲ, ಪ್ರಿಯಾಂಕಾ ಪಿ.ಕೆ, ಕಾಶಮ್ಮ ಎಸ್.ಸಿ, ವರ್ಷಾರಾಣಿ ಆರ್, ಮಲ್ಲಮ್ಮ ಬಿ.ಕೆ, ಶಿಲ್ಪಾ ಎಸ್.ಕೆ, ಸುಮನ್ ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.