ನ್ಯಾಯಾಂಗ ತನಿಖೆಗೆ ಸಿಎಂ ನಕಾರ

ಬೆಂಗಳೂರು,ನ.೧೯- ಮತದಾರರ ಪಟ್ಟಿ ಪರಿಷ್ಕರಣೆಯೆ ಲೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಬೇಡಿಕೆಯನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಇದು ಕ್ರಿಮಿನಲ್ ಪ್ರಕರಣ, ತ್ವರಿತವಾಗಿ ತನಿಖೆಯಾಗಬೇಕು. ಅದರಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಕೆಲವರನ್ನು ಬಂಧಿಸಿದೆ. ತೀವ್ರ ಗತಿಯಲ್ಲಿ ತನಿಖೆ ನಡೆದಿದೆ ಎಂದರು.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ ಪ್ರತಿವರ್ಷ ಇಲ್ಲವೇ ಚುನಾವಣಾ ಸಂದರ್ಭದಲ್ಲಿ ಪಟ್ಟಿ ಪರಿಷ್ಕರಣೆ ನಡೆಯುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗ ಕೇಳಿ ಬಂದಿರುವ ಆರೋಪಗಳು ಅಪರಾಧ ಪ್ರಕರಣಗಳಾಗಿದೆ. ಹಾಗಾಗಿ, ಪೊಲೀಸ್ ತನಿಖೆ ಸೂಕ್ತ. ಅದರಂತೆ ಪೊಲೀಸ್ ತನಿಖೆಯು ಚುರುಕಾಗಿ ಸಾಗಿದೆ ಎಂದರು.ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಬೇಡಿಕೆಗೆ ಕಿಡಿಕಾರಿದ ಅವರು, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡಿಎಗೆ ಸಂಬಂಧಿಸಿದಂತೆ ತನಿಖೆ ನಡೆಯಿತು. ಈ ಹಗರಣದಿಂದ ಪಾರಾಗಲು ನ್ಯಾಯಾಂಗ ತನಿಖೆ ನೆರವಾಯಿತು. ಕಾಂಗ್ರೆಸ್‌ನವರು ಹಾಲಿ ನ್ಯಾಯಾಧೀಶರಿಮದ ತನಿಖೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ರಸ್ತೆ ದುರಸ್ಥಿ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಕಾಮಗಾರಿ ನಿರಂತರ ಮಳೆಯಿಂದ ತಡವಾಗಿದೆ. ಮುಂದಿನವಾರ ದೆಹಲಿಗೆ ತಾವು ತೆರಳುತ್ತಿದ್ದು, ಆ ಸಂದರ್ಭದಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಆ ಸಂದರ್ಭದಲ್ಲಿ ಮಂಗಳೂರು-ಬೆಂಗಳೂರು ಹೆದ್ದಾರಿ ದುರಸ್ಥಿ ಕಾರ್ಯಗಳಾದ ಸುರಂಗಮಾರ್ಗ ವೈಟ್ ಟಾಪಿಂಗ್ ಮುಂತಾದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ರಸ್ತೆಯನ್ನು ವಾಹನ ಬಳಕೆಗೆ ಯೋಗ್ಯವಾಗಿಸುವುದು ಮೊದಲ ಆಧ್ಯತೆ ಎಂದರು.ಕರಾವಳಿ ಭಾಗದಲ್ಲಿ ಇಂಧನ ಉತ್ಪಾದನೆಗೆ ಒಂದೂವರೆಯಿಂದ ೨ ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದರು.