ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಲು ರಾಜಕೀಯ ಪಕ್ಷಗಳಲ್ಲಿ ಮನವಿ : ಕಾಯ್ದಿರಿಸಿದ ಮತಯಂತ್ರಗಳ ಪೂರಕ ರ್ಯಾಂಡ್‍ಮೈಜೇಶನ್

ವಿಜಯಪುರ, ಮೇ.08: ಸುಗಮ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮುಕ್ತ ನ್ಯಾಯಸಮ್ಮತ ಚುನಾವಣೆಗೆ ರಾಜಕೀಯ ಪಕ್ಷಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಗೆ ಹಂಚಿಕೆ ಮಾಡಲಾದ ಇವಿಎಂ ಹಾಗೂ ವಿವಿ ಪ್ಯಾಟ್ ಮತಯಂತ್ರಗಳನ್ನು ಪ್ರಥಮ ಹಂತದ ಪರಿಶೀಲನೆ ಮಾಡಿ, ನಂತರ ರ್ಯಾಂಡ್‍ಮೈಜೇಶನ್ ಮಾಡಿ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಆಯೋಗದ ನಿರ್ದೇಶನದಂತೆ ವಿಧಾನಸಭಾ ಮತಕ್ಷೇತ್ರವಾರು ವಿದ್ಯುನ್ಮಾನ ಮತಯಂತ್ರಗಳನ್ನು ಹಂಚಿಕೆ ಮಾಡುವ ಮೊದಲು ಎಫ್‍ಎಲ್‍ಸಿ ಪರಿಶೀಲನೆ ನಂತರ ಜಿಲ್ಲಾ ಮತಯಂತ್ರ ದಾಸ್ತಾನು ಕೊಠಡಿಯಲ್ಲಿ ಇರಿಸಲಾದ ಕಾಯ್ದಿರಿಸಿದ ವಿದ್ಯುನ್ಮಾನ ಮತಯಂತ್ರಗಳ ರ್ಯಾಂಡ್‍ಮೈಜೇಶನ್ ಪ್ರಕ್ರಿಯೆ ಇಂದು ನಡೆಸಲಾಯಿತು.
ಈಗಾಗಲೇ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ 6 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿ ಮತಗಟ್ಟೆಗಳಿಗೆ ಕಾಯ್ದಿರಿಸಿದ ಮತಯಂತ್ರಗಳಿಗೆ ಸಂಬಂಧಿಸಿದಂತೆ ಮುದ್ದೇಬಿಹಾಳ ಮತಕ್ಷೇತ್ರಕ್ಕೆ 3 ಬಿಯು, 3 ಸಿಯು, 3 ವಿವಿಪ್ಯಾಟ್‍ಗಳು ಹಾಗೂ ಬಬಲೇಶ್ವರ ಮತಕ್ಷೇತ್ರಕ್ಕೆ 3 ಬಿಯು, 3ಸಿಯು ಹಾಗೂ 3 ವಿವಿಪ್ಯಾಟ್‍ಗಳನ್ನು ಕಾಯ್ದಿರಿಸಲಾಗಿದೆ. ಅದರಂತೆ ವಿಜಯಪುರ ನಗರ ಮತಕ್ಷೇತ್ರಕ್ಕೆ 10 ಬಿಯು, 10 ಸಿಯು ಹಾಗೂ 10 ವಿವಿ ಪ್ಯಾಟ್, ನಾಗಠಾಣ ಮತಕ್ಷೇತ್ರಕ್ಕೆ 4 ಬಿಯು, 4 ಸಿಯು ಹಾಗೂ 4 ವಿವಿ ಪ್ಯಾಟ್‍ಗಳನ್ನು ಕಾಯ್ದಿರಿಸಲಾಗಿದೆ. ಸಿಂದಗಿ ಮತಕ್ಷೇತ್ರದಲ್ಲಿ 2 ಬಿಯು, 2 ಸಿಯು ಹಾಗೂ 2 ವಿವಿ ಪ್ಯಾಟ್‍ಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದ್ದು, ಯಂತ್ರಗಳ ಪೂರಕ ರ್ಯಾಂಡ್‍ಮೈಜೇಶನನ್ನು ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಇಂದು ನಡೆಸಲಾಯಿತು.
ವಿಧಾನಸಭೆಗೆ ಮೇ.10ರಂದು ಮತದಾನ ನಡೆಯಲಿದ್ದು, ಮತದಾನಕ್ಕಾಗಿ ಜಿಲ್ಲಾಡಳಿತದಿಂದ ಎಲ್ಲ ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ. ಮತದಾನಕ್ಕೆ 48 ಗಂಟೆ ಮುಂಚಿತವಾಗಿ ಅಂದರೆ ದಿನಾಂಕ : 08-05-2023ರ ಸಂಜೆ 6 ಗಂಟೆಯಿಂದ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಚುನಾವಣಾ ಪ್ರಚಾರಕ್ಕಾಗಿ ನೀಡಿರುವ ವಾಹನಗಳ ಅನುಮತಿ ನಾಳೆ ಸಂಜೆ ಮುಕ್ತಾಯವಾಗಲಿದೆ. ಮೇ.10ರಂದು ಅಭ್ಯರ್ಥಿ, ಏಜೆಂಟ್ ಹಾಗೂ ಓರ್ವ ಕಾರ್ಯಕರ್ತ ಸೇರಿದಂತೆ ಮೂರು ವಾಹನಗಳಿಗೆ ಚುನಾವಣಾ ಕಾರ್ಯ ಮಾತ್ರ ಅನುಮತಿ ನೀಡುವುದರಿಂದ ಈ ವಾಹನಗಳ ಅನುಮತಿಗಾಗಿ ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಮೇ.9 ರಂದು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಅಭ್ಯರ್ಥಿಯ ಹೆಸರಿನಲ್ಲಿ ಪಡೆದಿರುವ ವಾಹನವನ್ನು ಅಭ್ಯರ್ಥಿಗಳೇ ಬಳಸಬೇಕು. ಬೇರೆಯವರು ಬಳಸಬಾರದು. ಮತದಾನ ದಿನ ಮತಗಟ್ಟೆ ವ್ಯಾಪ್ತಿಯ 100 ಮೀ. ಪ್ರದೇಶದಲ್ಲಿ ಪ್ರಚಾರ ನಡೆಸುವಂತಿಲ್ಲ. ಮೊಬೈಲ್ ಫೋನ್ ಬಳಸುವಂತಿಲ್ಲ. ಚುನಾವಣಾ ಆಯೋಗ ನಿರ್ದೇಶನದಂತೆ ನಿಯಮಗಳನ್ನು ಎಲ್ಲರೂ ಪಾಲಿಸಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡರು.
ನಿಷೇಧಾಜ್ಞೆ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹಿನ್ನಲೆಯಲ್ಲಿ ಮತದಾನ ಮುಕ್ತಾಯವಾಗುವ 48ಗಂಟೆಗಳ ಅವಧಿಯೊಳಗಿನ ದಿನಗಳು ಅಂದರೆ ಮೇ.8ರ ಸಂಜೆ 6 ಗಂಟೆಯಿಂದ ಮೇ.10ರ ಮಧ್ಯರಾತ್ರಿ 12 ಗಂಟೆವರೆಗೆ ಹಾಗೂ ಮತ ಏಣಿಕೆ ದಿನವಾದ ಮೇ.13ರ ಬೆಳಿಗ್ಗೆ 6 ಗಂಟೆಯಿಂದ ಮೇ.14ರ ಬೆಳಿಗ್ಗೆ 6 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ-ತಯಾರಿಕೆ-ಸಂಗ್ರಹಣೆ ಹಾಗೂ ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಹಾಗೂ ಶುಷ್ಕ ದಿನಗಳೆಂದು ಘೋಷಿಸಿ, ಆದೇಶಿಸಲಾಗಿದೆ.
ಸಂತೆ-ಜಾತ್ರೆ ನಿಷೇಧಿಸಿ ಆದೇಶ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ದಿನಾಂಕ : 10-05-2023 ರಂದು ಮತದಾನ ಜರುಗಲಿದ್ದು, ಮತದಾನ ದಿನ ಹಾಗೂ ಮತದಾನ ಪೂರ್ವ ದಿನದಂದು ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಲಾಗಿದೆ. ಮತದಾನವು ಶಾಂತಿಯುತವಾಗಿ ಜರುಗಿಸುವ ದೃಷ್ಟಿಯಿಂದ ಮತದಾನ ಪೂರ್ವ ದಿನವಾದ ದಿನಾಂಕ : 09-05-2023 ಹಾಗೂ ಮತದಾನ ದಿನವಾದ ದಿನಾಂಕ : 10-05-2023ರ ಎರಡೂ ದಿನಗಳಂದು ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಿ ಆದೇಶಿಸಲಾಗಿದೆ.
ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹಿನ್ನಲೆಯಲ್ಲಿ ಮೇ.10ರಂದು ಮತದಾನ ಜರುಗಲಿದ್ದು, ಮತದಾನ ಮುಕ್ತಾಯವಾಗುವ 48ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುಗಮ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ದೃಷ್ಟಿಯಿಂದ ದಂಡ ಸಂಹಿತೆ 1973 ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಆದೇಶಿಸಲಾಗಿದೆ.
ಪ್ರತಿಬಂಧಕಾಜ್ಞೆ ಆದೇಶದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಸೇರಿ 5 ಜನರಿಗಿಂತ ಹೆಚ್ಚಿನ ಸಂಖ್ಯೆ ಜನರು ಸೇರುವಂತಿಲ್ಲ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡುವ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಮತಗಟ್ಟೆಗಳ 100 ಮೀಟರ್ ಒಳಗೆ ಚುನಾವಣೆ ಪ್ರಚಾರ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯ ಝರಾಕ್ಸ ಅಂಗಡಿ, ಬುಕ್‍ಸ್ಟಾಲ್, ಸೈಬರ್ ಕೆಫೆ ತೆರೆಯುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಕ್ಷಾರಪದಾರ್ಥ ಇಲ್ಲವೇ ಸ್ಪೋಟಕ್ ವಸ್ತುಗಳು, ಯಾವುದೇ ದಾಹಕ ವಸ್ತುಗಳು, ತೆಗೆದುಕೊಂಡು ಹೋಗುವುದು ಹಾಗೂ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ, ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಈ ಸ್ಥಳಗಳಲ್ಲಿ ಬಹಿರಂಗವಾಗಿ ಘೋಷಣೆ, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ, ವ್ಯಕ್ತಿಗಳ ತೇಜೋವಧೆ ಮಾಡುವ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಕಾನೂನು ಮತ್ತು ಸುವ್ಯವಸ್ಥೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಮಡು ಬಂದಲ್ಲಿ ವಶಪಡಿಸಿಕೊಳ್ಳುವ ಅಧಿಕಾರಿ ಪೋಲಿಸ್ ಅಧಿಕಾರಿಗಳು ಹೊಂದಿದ್ದು, ಅಂತಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಂಡು, ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್-19 ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
ಮತಗಟ್ಟೆಗಳ 100 ಮೀ. ವ್ಯಾಪ್ತಿಯಲ್ಲಿ (ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದ ಅಧಿಕಾರಿ-ಸಿಬ್ಬಂದಿಗಳು ಹೊರತುಪಡಿಸಿ) ಮೊಬೈಲ್ ಫೋನ್, ಕಾರ್ಡಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿದೆ. ಪ್ರಚಾರಕ್ಕೆ ಸಮಬಂಧಿಸಿದ ಪೋಸ್ಟ್‍ರ್ ಬ್ಯಾನರ್ ವಸ್ತುಗಳನ್ನು ಬಳಸುವಂತಿಲ್ಲ. ಈ ಅವಧಿಯಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ., ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಅವಧಿಯಲ್ಲಿ ಮತದಾರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗಬೇಕು. ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮತ್ತು ಅತಿಥಿಗೃಹಗಳಲ್ಲಿ ವಾಸ್ತವ್ಯ ಹೂಡಿರುವವರ ಪರಿಶೀಲನೆ ನಡೆಸಿ, ಮತದಾರರಲ್ಲದವರನ್ನು ಹೊರಗೆ ಕಳುಹಿಸಲು ಕ್ರಮ ವಹಿಸಲಾಗುವುದು.
ಈ ಆದೇಶ ಉಲ್ಲಂಘಿಸಿದವರ ವಿರುದ್ದ ಭಾರತೀಯ ದಂಡ ಸಂಹಿತೆಯ 188ರ ಪ್ರಕಾರ ಕ್ರಮ ಜರುಗಿಸಲಾಗುವುದು. ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ, ಪೋಲಿಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮತ್ತು ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.