ದೇವದುರ್ಗ,ಮಾ.೩೦- ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರ ೧೮೮ಹಳ್ಳಿ ಒಳಗೊಂಡಿದ್ದು, ೨೮೦೬೦೬ಜನಸಂಖ್ಯೆಯಿದ್ದು, ಮಾರ್ಚ್ ಅಂತ್ಯಕ್ಕೆ ೨೩೧೧೫೭ ಅರ್ಹ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನಕುಮಾರ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ೧೪೭೦೧ಪುರುಷ, ೧೧೬೪೫೨ ಮಹಿಳಾ ಹಾಗೂ ನಾಲ್ವರು ತೃತೀಯ ಲಿಂಗಿ ಮತದಾರರಿದ್ದಾರೆ. ಒಟ್ಟು ೨೬೫ಮತಗಟ್ಟೆ ಕೇಂದ್ರಗಳಿದ್ದು, ೧೪೨ಸಾಮಾನ್ಯ, ೭೨ಸೂಕ್ಷ್ಮ ಹಾಗೂ ೬೧ಅತಿಸೂಕ್ಷ್ಮ ಮತಗಟ್ಟೆ ಕೇಂದ್ರ ಎಂದು ಗುರುತಿಸಲಾಗಿದೆ. ಮತದಾನಕ್ಕಾಗಿ ೭೯ರೂಟ್ಸ್ ಸಿದ್ದಪಡಿಸಿದ್ದು ೩೩ಬಸ್, ೨೩ಮಿನಿ ಬಸ್ ಹಾಗೂ ೨೩ಟ್ಯಾಕ್ಸಿ ನಿಯೋಜಿಸಲಾಗುತ್ತಿದೆ.
ಪಟ್ಟಣದ ಮಿನಿವಿಧಾನಸೌಧದಲ್ಲಿ ಏ.೧೩ರಿಂದ ೨೦ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಪಟ್ಟಣದ ಡಾನ್‌ಬೋಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಮಾಡಲಾಗುತ್ತಿದ್ದು, ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ ಸೇರಿ ಅಗತ್ಯ ಮಾಹಿತಿ ನೀಡಲಾಗುವುದು. ರಾಯಚೂರಿನ ಎಸ್‌ಆರ್‌ಪಿಎ ಪಿಯು ಕಾಲೇಜಿನಲ್ಲಿ ಸ್ಟ್ರಾಂಗ್‌ರೂಮ್ ಮಾಡಲಾಗಿದ್ದು ಅಲ್ಲಿಯೇ ಮತ ಎಣಿಕೆ ಕಾರ್ಯ ಜರುಗಲಿದೆ.
ಬಸ್ಸಾಪುರ ಕೇಂದ್ರದಲ್ಲಿ ಅತ್ಯಂತ ಕಡಿಮೆ ೨೦೨ಮತದಾರರಿದ್ದರೆ, ಪಟ್ಟಣದ ೪೭ನೇ ಕೇಂದ್ರದಲ್ಲಿ ಅತಿಹೆಚ್ಚು ೧೪೯೮ಮತದಾರರಿದ್ದಾರೆ. ೩೧೮ಪಿಆರ್‌ಒ ಸೇರಿ ೧೨೭೨ ಅಧಿಕಾರಿ, ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ೨೬೫ಬೂತ್‌ಗಳಿಗೆ ಇವಿಎಂ ಯಂತ್ರ ಬಳಸಲಾಗುತ್ತಿದ್ದು, ಹೆಚ್ಚುವರಿಯಾಗಿ ಶೇ.೨೦(೫೩) ಇವಿಎಂ ಕಾಯ್ದಿರಿಸಲಾಗಿದೆ. ನಿರ್ಭಯ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಉಪಚುನಾವಣಾಧಿಕಾರಿ ಆರ್.ವೈ.ಬಿದರಿ, ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಅರಕೇರಾ ತಹಸೀಲ್ದಾರ್ ಯಲ್ಲಪ್ಪ, ಶಿರಸ್ತೇದಾರ್ ಇತರರು ಸೇರಿದಂತೆ ಉಪಸ್ಥಿತರಿದ್ದರು.