ನ್ಯಾಯವಾದಿಗಳ ಹಿತಾಸಕ್ತಿಗೆ ಸದಾ ಬದ್ಧ; ಪ್ರಭು ಚೌಹಾಣ್

(ಸಂಜೆವಾಣಿ ವಾರ್ತೆ)
ಬೀದರ್;ಜ.2: ಜನತೆಗೆ ನ್ಯಾಯ ಒದಗಿಸುವ ಕೆಲಸದಲ್ಲಿ ತೊಡಗಿರುವ ನ್ಯಾಯವಾದಿಗಳ ಹಿತಾಸಕ್ತಿಗೆ ಸದಾ ಬದ್ದನಿದ್ದೇನೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಔರಾದ ತಾಲ್ಲೂಕು ವಕೀಲರ ಸಂಘದಿಂದ ಮೊನ್ನೆ ವಕೀಲರ ಸಂಘದ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಔರಾದನಲ್ಲಿ ಸುಸಜ್ಜಿತ ನ್ಯಾಯಾಲಯ ಕಟ್ಟಡ ನಿರ್ಮಿಸಬೇಕು ಎಂಬುದು ವಕೀಲರ ಬೇಡಿಕೆಯಾಗಿದೆ. ನನ್ನ ಬಯಕೆಯೂ ಇದ್ದು, ಹಲವು ವರ್ಷಗಳಿಂದ ಇದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಕಾರಣಾಂತರಗಳಿಂದ ವಿಳಂಬವಾಗಿದ್ದು, ಇದರ ಕಡತ ಕ್ಯಾಬಿನೆಟ್ ಹಂತದಲ್ಲಿದ್ದು ಶೀಘ್ರದಲ್ಲಿಯೇ ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣ ಕೆಲಸ ಆರಂಭಿಸಲಾಗುವುದು ಎಂದರು.
ವಕೀಲರ ಸಂಘದ ಪದಾಧಿಕಾರಿಗಳು ಔರಾದಗೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ತರಲು ಸಹಕರಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರನ್ನು ಭೇಟಿಯಾಗಿ ಈ ಕುರಿತು ಮನವರಿಕೆ ಮಾಡಿಕೊಡುತ್ತೇನೆ. ವಕೀಲರ ಸಂಘದಪ್ರಮುಖರೊಂದಿಗೂ ಕೂಡ ಸಚಿವರನ್ನು ಭೇಟಿ ಮಾಡಲಾಗುವುದು. ತಾಲ್ಲೂಕಿಗೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ತರುವ ನಿಟ್ಟಿನಲ್ಲಿ ವಕೀಲರ ಸಂಘದ ಜೊತೆಗೆ ಸದಾ ನಿಲ್ಲುತ್ತೇನೆ ಎಂದರು.
ಹಿಂದಿನಿಂದಲೂ ವಕೀಲರ ಸಂಘ ಅಥವಾ ವಕೀಲರು ಸಲ್ಲಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿರುತ್ತದೆ. ಅವರ ಬೇಕು ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಏನೆ ಬೇಡಿಕೆಗಳಿದ್ದರೂ ಯಾವುದೇ ಅಳುಕಿಲ್ಲದೇ ತಮ್ಮನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವಿ.ಎಸ್ ಜಾಧವ್ ಅವರು ಮಾತನಾಡಿ, ಸಚಿವರ ಕೆಲಸ ಕಾರ್ಯಗಳನ್ನು ಸ್ಮರಿಸಿದರು ಹಾಗೆಯೇ ಸಚಿವರಿಂದ ಆಗಬೇಕಾದ ಕೆಲಸಗಳ ಬಗ್ಗೆ ಬೇಡಿಕೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಸಂದೀಪ್, ಸಂತೋಷ ಉಪ್ಪೆ, ಜೆ.ಗಣಪತರಾವ, ಬಾಲಾಜಿ ಕಂಬಾರ, ರಾಜೇಂದ್ರ ಜಾಧವ, ಅನೀಲ ವಾಡೇಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.