ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಿಗೆ ಪುಸ್ತಕ ಉಡುಗೊರೆ ಮೂಲಕ ಪುಸ್ತಕ ದಿನಾಚರಣೆ

ಕಲಬುರಗಿ.ಏ.23: ವಿಶ್ವ ಪುಸ್ತಕ ದಿನಾಚರಣೆ ನಿಮಿತ್ಯ ಶುಕ್ರವಾರದಂದು ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ರಾಜಕುಮಾರ್ ಕಡಗಂಚಿ ಅವರಿಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕ ಅಧ್ಯಕ್ಷ ಹಾಗೂ ನ್ಯಾಯವಾದಿ ಶಿವರಾಜ್ ಅಂಡಗಿ ಅವರು ಪುಸ್ತಕಗಳು ಕಾಣಿಕೆಯಾಗಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾನೂನು ಚೆನ್ನಾಗಿ ಅರಿತಿರುವ ನೀವು, ಕಾನೂನು ರಕ್ಷಣೆ ಮಾಡುವ ರೀತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಗಮನ ಹರಿಸಬೇಕು. ಯಾರೋ ಬರೆದಿರುವಂತಹ ಸಾಹಿತ್ಯವನ್ನು ತಮ್ಮ ಸಾಹಿತ್ಯ ಎಂದು ಕಟ್-ಪೇಸ್ಟ್ ಮಾಡುವ ಮೂಲಕ ನಾನೇ ಇದನ್ನು ಬರೆದಿದ್ದೇನೆ ಎಂದು ಪ್ರಕಟಿಸಿಕೊಂಡು ಮೆರೆದಾಡುತ್ತಿರುವ ಅನೇಕ ನಕಲಿ ಸಾಹಿತಿಗಳಿಗೆ ಪಾಠ ಕಲಿಸುವಂತಹ ಕ್ರಮ ಜರುಗಿಸಬೇಕು ಎಂದರು.
ಹಾಗಾಗಿ ನಿಮ್ಮಂತಹ ವಿದ್ಯಾವಂತರು, ಪದವಿಧರರು, ಸಾಹಿತ್ಯ ಕ್ಷೇತ್ರದ ಕಡೆ ಮುಖ ಮಾಡಿ ಕಾನೂನು ರಕ್ಷಣೆಯೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಸೇವೆ ದೊರೆಯಲಿ ಎಂದು ಹೇಳಿದ ಅವರು, ದಿವಂಗತ ಫ.ಗು. ಹಳಕಟ್ಟಿ ಅವರು ನ್ಯಾಯವಾದಿಯಾಗಿ ವಚನ ಸಾಹಿತ್ಯ ಉಳಿಸಿ-ಬೆಳೆಸಿಕೊಂಡು ಬರದಿದ್ದರೆ ಇಂದಿನ ಪೀಳೆಗೆಗೆ ವಚನಗಳಾಗಲಿ, ವಚನ ಸಾಹಿತ್ಯವಾಗಲಿ ಪರಿಚಯವೇ ಇರುತ್ತಿರಲಿಲ್ಲ ಅದೇ ನಿಟ್ಟಿನಲ್ಲಿ ತಾವು ಕೂಡಾ ನ್ಯಾಯವಾದಿಗಳಾಗಿದ್ದು ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಸೇವೆ ದೊರಕುವಂತಾಗಲಿ ಎಂದು ನೂತನವಾಗಿ ಆಯ್ಕೆಯಾದ ಜಿಲ್ಲಾ ನ್ಯಾಯವಾದಿಗಳ ಸಂಘದ ರಾಜಕುಮಾರ್ ಕಡಗಂಚಿ ಅವರಿಗೆ ಹಾರೈಸಿದರು. ಇದೇ ಸಂದರ್ಭದಲ್ಲಿ ನ್ಯಾಯವಾದಿ ವಿನೋದಕುಮಾರ್ ಜೇನೆವೆರಿ ಅವರು ಉಪಸ್ಥಿತರಿದ್ದರು.