ನ್ಯಾಯವಾದಿಗಳಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ:ಎ.13: ವೃತ್ತಿಪರರು ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಸಮಗ್ರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಹೇಳಿದ್ದಾರೆ.
ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಟೇಶಾಲಿಟಿ ಆಸ್ಪತ್ರೆ ಮತ್ತು ನ್ಯಾಯವಾದಿಗಳ ಸಂಘ ನ್ಯಾಯವಾದಿಗಳಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯ ಬಹುಮುಖ್ಯ. ಅದರಲ್ಲೂ ವೃತ್ತಿಪರರು ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಗಾಗ ತಪಾಸಣೆ ಮಾಡಿಸುವುದರಿಂದ ನಾನಾ ಕಾಯಿಲೆಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ರೋಗಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಮಂಡಳಿ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳಿಂದಾಗುವ ಲಾಭಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಐ.ಜಿ.ಚಾಲಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ಬಿ. ಜಾಹಾಗೀರದಾರ, ಕಾರ್ಯದರ್ಶಿ ಅಶೋಕ ಜೈನಾಪುರ, ಡಾ.ದರ್ಶನ ಬಿರಾದಾರ, ಡಾ.ಸೃಷ್ಠಿ ವಾಲದ, ಡಾ.ಮೀಲನ ಕುಲಕರ್ಣಿ, ವೀರಣ್ಣ, ರವಿ, ಆಸ್ಮಾ ಪಟೇಲ ಮುಂತಾದವರು ಉಪಸ್ಥಿತರಿದ್ದರು.