ನ್ಯಾಯಯುತ ಸವಲತ್ತು ಒದಗಿಸಲು ಆಗ್ರಹ

ಹುಬ್ಬಳ್ಳಿ,ನ4: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಜನರ ಆರ್ಥಿಕ ಸುಧಾರಣೆಗೆ ಶ್ರಮಿಸುತ್ತಿದೆ. ಆದರೆ ಸಹಕಾರ ಸಂಘದಲ್ಲಿ ದುಡಿಯುತ್ತಿರುವ ನೌಕರರು ಸರ್ಕಾರದಿಂದ ದೊರೆಯಬೇಕಿದ್ದ ನ್ಯಾಯಯುತ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಬ್ಯಾಂಕ್ ಗಳ ಕ್ಷೇಮಾಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಡಿ.ಎಸ್.ಬಡಗಿಗೌಡ್ರು ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಪ್ರಾರಂಭವಾಗಿ 118 ವರ್ಷಗಳು ಕಳೆದಿದೆ. ಆದರೆ ಸಂಘಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮುಂತಾದ ಸೌಲಭ್ಯಗಳನ್ನು ನೀಡದೇ ಇರುವುದು ದುರಂತ ಎಂದು ದೂರಿದರು.
ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಗ್ರಾಮೀಣ ಮಟ್ಟದ ಸಹಕಾರ ಸಂಘಗಳು ದೇಶದ ಅಭಿವೃದ್ಧಿಗೆ ಬಹುಮುಖ್ಯ ಎಂದು ಸಂಘಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಆದರೆ ಸಂಘದಲ್ಲಿ ಕರ್ತವ್ಯ ಮಾಡುವ ನೌಕರರಿಗೆ ಸರ್ಕಾರ ಯಾವುದೇ ಕಾಯಿದೆ ರೂಪಿಸಿ ಕನಿಷ್ಠ ಸೌಲಭ್ಯ ಒದಗಿಸುವ ಸೌಜನ್ಯಕ್ಕೂ ಮುಂದಾಗಿಲ್ಲ. ಅಲ್ಲದೇ ಪಕ್ಕದ ರಾಜ್ಯದಲ್ಲಿ ನೀಡುತ್ತಿರುವ ಸೇವಾ ಸೌಲಭ್ಯಗಳ ಕುರಿತು ಸರ್ಕಾರ ರಚಿಸಿದ್ದ ಸಮಿತಿ ಅಧ್ಯಯನ ಮಾಡಿ ವರದಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ದಿಸೆಯಲ್ಲಿ ಮುಂದಿನ ಡಿ.5 ರೊಳಗಾಗಿ ಸಹಕಾರ ಸಂಘದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದೇ ಹೋದಲ್ಲಿ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಲ್ಲದೇ ಸಂಘಗಳಿಗೆ ಸಾಲಗಳ ಮಾರ್ಜಿನ ಹಣವನ್ನು ಕನಿಷ್ಠ 3 ರೂಪಾಯಿಗೆ ಏರಿಸಬೇಕು, ಯಶಸ್ವಿನಿ ಯೋಜನೆಯಲ್ಲಿ ಸಂಘಗಳಿಗೆ ನೀಡುತ್ತಿರುವ ಪೆÇ್ರೀತ್ಸಾಹ ಧನ ಖೋತಾ ಆಗಿದ್ದು, ಈ ದಿಸೆಯಲ್ಲಿ ಒಂದು ಯಶಸ್ವಿನಿ ಕಾರ್ಡ್ ನೊಂದಾಯಿಸಲು 10 ರೂ ಪೆÇ್ರೀತ್ಸಾಹ ಧನ ನಿಗಧಿ ಪಡಿಸಬೇಕು, ಕೇಂದ್ರ ಸರ್ಕಾರದ ಆದೇಶದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲ ವ್ಯವಹಾರ, ದತ್ತಾಂಶ ಸಂಗ್ರಹಣೆಯನ್ನು ಗಣಕೀಕೃತ ಮಾಡಿರುವುದು ಖುಷಿಯ ವಿಚಾರ. ಆದರೆ ಇದರ ನಿಯಂತ್ರಣವನ್ನು ಸಹಕಾರ ಇಲಾಖೆಯ ಮೂಲಕ ಮಾಡುವುದು ಸೂಕ್ತ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ, ಜನಾರ್ದನ, ಕಲ್ಲನಗೌಡ್ರ ಸೇರಿದಂತೆ ಮುಂತಾದವರು ಇದ್ದರು.