ನ್ಯಾಯಮಂಡಳಿಗಳಿಗೆ ಸಿಬ್ಬಂದಿ ನೇಮಿಸಲು ಕೇಂದ್ರಕ್ಕೆ ಸುಪ್ರೀಂ ಗಡುವು

ನವದೆಹಲಿ,ಸೆ.೧೫- ದೇಶದ ವಿವಿಧ ನ್ಯಾಯ ಮಂಡಳಿಗಳಿಗೆ ತುರ್ತಾಗಿ ಎರಡು ವಾರಗಳಲ್ಲಿ ಸಿಬ್ಬಂದಿ ನೇಮಕಾತಿ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕೋರ್ಟ್ ನೀಡಿರುವ ಗಡುವಿನೊಳಗೆ ನೇಮಕಾತಿ ನಡೆಯದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.
ವಿವಿಧ ನ್ಯಾಯಮಂಡಳಿಗಳಲ್ಲಿ ಅಧ್ಯಕ್ಷರು, ನ್ಯಾಯಾಂಗ, ತಾಂತ್ರಿಕ ಸದಸ್ಯರ ಕೊರತೆ ತೀವ್ರವಾಗಿದ್ದು, ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕೇಂದ್ರಕ್ಕೆ ತಾಕೀತು ಮಾಡಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಶಿಫಾರಸ್ಸು ಮಾಡಲಾಗಿರುವ ವ್ಯಕ್ತಿಯನ್ನು ಒಂದು ವೇಳೆ ತೆಗೆದು ಹಾಕಿದರೆ ಅದಕ್ಕೆ ಸಮರ್ಪಕ ಉತ್ತರ ನೀಡುವಂತೆ ಸೂಚಿಸಿದೆ.
ಈ ಪ್ರಕರಣದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣಾ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ನಡೆಯಿತು.
ದೇಶಾದ್ಯಂತ ಅರೆ ನ್ಯಾಯಾಂಗ ಸಂಸ್ಥೆಗಳಲ್ಲಿ ಭರ್ತಿ ಮಾಡದಿರುವ ಹುದ್ದೆಗಳ ಬಗ್ಗೆ ನ್ಯಾಯಪೀಠ ತೀವ್ರ ಅಸಮಾಧಾನ ಹೊರ ಹಾಕಿದ್ದು, ಇದು ಕರುಣಾಜನಕ ಸ್ಥಿತಿಯಾಗಿದ್ದು, ದಾವೆ ಹೂಡುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಶೋಧ ಮತ್ತು ಆಯ್ಕೆ ಸಮಿತಿಯಿಂದ ಶಿಫಾರಸ್ಸು ಮಾಡಲಾದ ವ್ಯಕ್ತಿಗಳ ಪಟ್ಟಿಯಿಂದ ವಿವಿಧ ನ್ಯಾಯಮಂಡಳಿಗಳಿಗೆ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರ ನೇಮಕಾತಿ ಮಾಡಲಿದೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.