ನ್ಯಾಯಬೆಲೆ ಅಂಗಡಿಗಳ ೪೮ ಕೋಟಿ ರೂ.ಕಮೀಷನ್ ಹಣ ಬಿಡುಗಡೆ

ಗುಬ್ಬಿ, ನ. ೧೨- ಆಹಾರ ಇಲಾಖೆಯ ಅಧಿಕಾರಿಗಳಿಂದ ಆಗಿದ್ದ ನೂನ್ಯತೆ ಸರಿಪಡಿಸಿ ೪೮ ಕೋಟಿ ರೂ.ಗಳ ನ್ಯಾಯಬೆಲೆ ಅಂಗಡಿಗಳ ಕಮಿಷನ್ ಹಣ ಬಿಡುಗಡೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಗೆ ಭೇಟಿ ನೀಡಿ ಡಾಟಾ ಎಂಟ್ರಿ ಆಪರೇಟರ್‍ಗಳ ಬೇಡಿಕೆಯ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಅಧಿಕಾರಿಗಳಿಂದ ಆಗಿದ್ದ ಲೋಪ ಸರಿಪಡಿಸಲು ಸಮಯ ತೆಗೆದುಕೊಳ್ಳಲಾಗಿತ್ತು. ಎಲ್ಲವೂ ಸರಿಪಡಿಸಿ ಹಣಕಾಸು ಇಲಾಖೆ ಸಮ್ಮತಿ ಸೂಚಿಸಿ ಆಹಾರ ಇಲಾಖೆಗೆ ಸಂಬಂಧಿಸಿದ ಎಲ್ಲ ಹೊಸ ಯೋಜನೆಗೆ ಅಸ್ತು ದೊರಕಿದೆ ಎಂದರು.
ಆಹಾರ ಇಲಾಖೆಯಲ್ಲಿ ಕಂಪ್ಯೂಟರೀಕರಣಗೊಳಿಸಿದ ಬಳಿಕ ಚುರುಕಿನ ಕೆಲಸ ನಡೆದಿದೆ. ಆದರೆ ಕೆಲ ತಾಂತ್ರಿಕ ಸಮಸ್ಯೆ ಕೂಡಾ ಕಾಣಿಸಿಕೊಳ್ಳುತ್ತಿವೆ. ಇದರ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ ಆಧುನಿಕತೆಗೆ ತಕ್ಕಂತೆ ಆಹಾರ ಪಡಿತರ ವಿತರಣೆ ಮಾಡಲಾಗುವುದು. ಕೊರೊನಾ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ ಆಹಾರ ಪಡಿತರ ವಿತರಣೆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳ ಸಹಕಾರ ದೊರೆಕಿದೆ ಎಂದ ಅವರು, ಮುಂದಿನ ೧೫ ದಿನಗಳಲ್ಲಿ ತುಮಕೂರು ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಂಡು ಈ ಭಾಗದ ಸಮಸ್ಯೆ ಆಲಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಡಾಟಾ ಎಂಟ್ರಿ ಆಪರೇಟರ್‍ಗಳ ಸಂಘದ ವತಿಯಿಂದ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಟಿಎಪಿಸಿಎಂಎಸ್ ವತಿಯಿಂದ ಸಚಿವ ಕೆ. ಗೋಪಾಲಯ್ಯ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಎಸ್. ಕಿಡಿಗಣಪ್ಪ, ನಿರ್ದೇಶಕರಾದ ಟಿ.ಎಸ್. ಆಂಜಿನಪ್ಪ, ಪರಮಣ್ಣ, ಕಾರ್ಯದರ್ಶಿ ಶ್ರೀನಾಥ್, ಶ್ರೀಧರ್, ಲವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.