ನ್ಯಾಯಕ್ಕಾಗಿ ಮಧುಗಿರಿ ಎಸಿ ಕಾಲಿಗೆ ಬಿದ್ದ ಅಕ್ಕಾಜಿಹಳ್ಳಿ ರೈತ

ಕೊರಟಗೆರೆ, ನ. ೨೨- ಬಗರ್ ಹುಕುಂ ಕಮಿಟಿಯಿಂದ ಮಂಜೂರಾಗಿ ಕಿಮ್ಮತ್ತು ಕಟ್ಟಿಸಿಕೊಂಡು ಸಾಗುವಳಿ ಕೊಡದೆ ಕೊರಟಗೆರೆ ಕ್ಷೇತ್ರದ ೪೦೦ಕ್ಕೂ ಹೆಚ್ಚು ಗ್ರಾಮೀಣ ರೈತರಿಗೆ ಕಳೆದ ೨೦ ವರ್ಷಗಳಿಂದ ಪ್ರತಿನಿತ್ಯ ಅಲೆದಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾ.ಪಂ. ವ್ಯಾಪ್ತಿಯ ಅಕ್ಕಾಜಿಹಳ್ಳಿ ಗ್ರಾಮದ ಸರ್ವೆ ನಂ. ೩೩ ರಲ್ಲಿ ಕಳೆದ ೩೦ ವರ್ಷದಿಂದ ಔದಾರನಹಳ್ಳಿ ಗ್ರಾಮದ ದಾಳಿ ನರಸಿಂಹಯ್ಯ ಮತ್ತು ಕಾಮಯ್ಯ ಎಂಬುವರು ೪ ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ೧೯೯೧-೯೨ರಲ್ಲಿ ಅರ್ಜಿ ಸಲ್ಲಿಸಿ ೨೦೦೩ರಲ್ಲಿ ಟಿಟಿ ಕಟ್ಟಿರುವ ಜಮೀನು ಅನಧಿಕೃತವಾಗಿ ಬೆಂಗಳೂರು ಮೂಲದ ಒಂದೇ ಕುಟುಂಬದ ೪ ಜನರ ಹೆಸರಿಗೆ ೨೦೧೭-೧೮ರಲ್ಲಿ ಸಾಗುವಳಿ ಚೀಟಿ ಕೊಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನ್ಯಾಯಕ್ಕಾಗಿ ಎಸಿ ಕಾಲಿಗೆ ಬಿದ್ದ ರೈತ
ಅಕ್ಕಾಜಿಹಳ್ಳಿ ಸರ್ವೆ ನಂ.೩೩ರಲ್ಲಿ ಕಳೆದ ೩೦ ವರ್ಷದಿಂದ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾನು ಕಟ್ಟಿರುವ ಎಲ್ಲಾ ದಾಖಲೆಯನ್ನು ತಹಶೀಲ್ದಾರ್‍ಗೆ ನೀಡಿದ್ದೇನೆ. ಬೆಂಗಳೂರು ಮೂಲದ ಶ್ರೀಮಂತರಿಗೆ ನಾನು ಉಳುಮೆ ಮಾಡುತ್ತೀರುವ ಜಮೀನಿನ ಸಾಗುವಳಿ ಚೀಟಿ ನೀಡಲಾಗಿದೆ. ದಯವಿಟ್ಟು ನನಗೆ ನ್ಯಾಯದ ಜತೆ ಭದ್ರತೆ ನೀಡಬೇಕು ಎಂದು ಮಧುಗಿರಿ ಉಪ ವಿಭಾಗಾಧಿಕಾರಿ ಡಾ.ನಂದಿನಿದೇವಿ ಕಾಲಿಗೆ ಬಿದ್ದು ಮನವಿ ಮಾಡಿದ ಘಟನೆ ನಡೆಯಿತು.
ಜನಸ್ನೇಹಿ ಅಧಿಕಾರಿ ಮಧುಗಿರಿ ಎಸಿ
ರೈತ ಸಂಘದ ಜಿಲ್ಲಾಧ್ಯಕ್ಷ ಮತ್ತು ರೈತ ಮುಖಂಡರ ಸಭೆಯಲ್ಲಿ ಕೊರಟಗೆರೆ ರೈತರ ಸಮಸ್ಯೆಗಳ ಮಾಹಿತಿ ಪಡೆದ ಮಧುಗಿರಿ ಉಪ ವಿಭಾಗಾಧಿಕಾರಿ ಡಾ.ನಂದಿನಿದೇವಿ, ೨೦ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ನಂತರ ರೈತರ ಬಳಿಯೇ ತೆರಳಿ ಎರಡು ಗಂಟೆಗಳ ಕಾಲ ರೈತರ ಸಮಸ್ಯೆ ಮತ್ತು ಮನವಿಯನ್ನು ಆಲಿಸಿ ೧೮೦ ಕ್ಕೂ ಅಧಿಕ ಅಹವಾಲು ಸ್ವೀಕರಿಸಿ ತಕ್ಷಣ ಬಗೆಹರಿಸುವಂತೆ ತಹಶೀಲ್ದಾರ್ ಗೋವಿಂದರಾಜುಗೆ ಸೂಚನೆ ನೀಡಿ ಜನಸ್ನೇಹಿ ಅಧಿಕಾರಿಯಾಗಿ ರೈತರಿಂದ ಮೆಚ್ಚುಗೆಗೆ ಪಾತ್ರರಾದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್, ಕಾರ್ಯದರ್ಶಿ ರುದ್ರೇಶಗೌಡ, ಕೊರಟಗೆರೆ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಟ್ಟರಾಜು, ಮುಖಂಡರಾದ ಮಂಜುನಾಥ, ಲಕ್ಷ್ಮನಾಯ್ಕ, ರವಿಕುಮಾರ್, ಚೇತನ್, ರಾಮಣ್ಣ, ಶಿವಕುಮಾರ್, ದಾಸಗಿರಿಯಪ್ಪ, ನಾಗರಾಜು, ಪ್ರಸನ್ನಕುಮಾರ್, ಗೋವಿಂದರಾಜು, ನರಸಿಂಹಮೂರ್ತಿ, ಪುಟ್ಟನರಸಪ್ಪ, ಕೃಷ್ಣಪ್ಪ, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.