ನ್ಯಾಯಕ್ಕಾಗಿ ಪ್ರಾಣತೆತ್ತ ಸಾಲುಮರದ ವೀರಾಚಾರಿ

ದಾವಣಗೆರೆ, ಸೆ. ೨೦- ಪರಿಸರ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದಿದ್ದ ಮಿಟ್ಲಕಟ್ಟೆಯ ಸಾಲು ಮರದ ವೀರಾಚಾರಿ ನೇಣಿಗೆ ಶರಣಾಗಿದ್ದಾರೆ.
ಮಧ್ಯರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಅವರು ಸಾವನ್ನಪ್ಪಿದ್ದಾರೆ.ಸಾಲುಮರ ಬೆಳೆಸಿದ್ದ ಪರಿಸರಪ್ರೇಮಿಗೆ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿತ್ತು. ಮಿಟ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ವೀರಾಚಾರಿಯವರು ಹೋರಾಟ ಮಾಡುತ್ತಿದ್ದರು.ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ದೂರಿ ನ್ಯಾಯಬೆಲೆ ಅಕ್ರಮದ ವಿರುದ್ಧ ನಿರಂತರವಾಗಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದರು.ನಿನ್ನೆ ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯಬೆಲೆ ಅಂಗಡಿ ರದ್ದು ಮಾಡಬೇಕೋ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು
ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ, ಜನರಲ್ಲಿ ನ್ಯಾಯ ಸಿಗದಿದ್ದರೆ, ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣು ಎಂಬ ವಾಗ್ದಾನವನ್ನು ವೀರಾಚಾರಿಯವರು ಮಾಡಿದ್ದರು ಎನ್ನಲಾಗಿದೆ.
ತಮ್ಮ ವಾಗ್ದಾನದಂತೆ ನಿನ್ನೆ ರಾತ್ರಿ ೨ ಗಂಟೆಗೆ ಮಿಟ್ಲಕಟ್ಟೆ ವೀರಾಚಾರಿಯವರು ನೇಣಿಗೆ ಶರಣಾಗಿದ್ದಾರೆ.ಬಡವರ ಅನ್ನಕ್ಕೆ ಕನ್ನ ಬಿದ್ದಿದೆ ಅವರ ಅಂಗಡಿ ಮುಚ್ಚಿಸಿ ಎಂದು ನಿರಂತರ ಹೋರಾಟ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ನೊಂದುಕೊಂಡಿದ್ದರು.ಕಳೆದ ೧೧ ತಿಂಗಳಿನಿಂದ ಮುಚ್ಚಿದ್ದ ಅಂಗಡಿಗೆ ನಿನ್ನೆ ಪ್ರಾರಂಭಿಸಲು ಜಿಲ್ಲಾಧಿಕಾರಿ ಅವಕಾಶ ನೀಡಿದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವೀರಾಚಾರಿಯವರ ಸಾವಿನಿಂದ ರೊಚ್ವಿಗೆದ್ದಿರುವ ಮಿಟ್ಲಕಟ್ಟೆ ಗ್ರಾಮಸ್ಥರು ರಸ್ತೆಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ
ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಳಿಸದಂತೆ ಪಟ್ಟು ಹಿಡಿದ ಘಟನೆ ನಡೆದಿದೆ.
ಅಲ್ಲದೇ ನ್ಯಾಯಬೆಲೆ ಅಂಗಡಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಹಶೀಲ್ದಾರ್ ಬಸವನಗೌಡ ಕೋಟೂರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದರು.