ನ್ಯಾಮತಿ ಕಸಾಪ ಬಳಗದಿಂದ ವಾಮದೇವಪ್ಪಗೆ ಬೆಂಬಲ

ನ್ಯಾಮತಿ.ಏ.೨೩: ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಧಿ ಬಿ. ವಾಮದೇವಪ್ಪ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಗೌಡ ಪಾಟೀಲ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಸಾಪ ಸದಸ್ಯರು ತೀರ್ಮಾನ ಕೈಗೊಂಡರು. ಕಸಾಪ ಅಭ್ಯರ್ಥಿ ಬಿ. ವಾಮದೇವಪ್ಪ ಮಾತನಾಡಿ, ಕನ್ನಡ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕ.ಸಾ.ಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಮಾತನಾಡಿ, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ನಡೆದ ಪ್ರಕ್ರಿಯೆಗಳ ಬಗ್ಗೆ ತಿಳಿಸಿ. ವಾಮದೇವಪ್ಪ ಅವರ ಪ್ರತಿಸ್ಪರ್ಧಿಯ ಠೇವಣಿಯನ್ನು ಕಳೆಯುವ ಮೂಲಕ ಅವಿರೋಧ ಆಯ್ಕೆಯಾಗಿ ಅಡ್ಡಿಯಾದವರಿಗೆ ಪಾಠ ಕಲಿಸಬೇಕಿದೆ. ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದರು. ತಾಲ್ಲೂಕು ಕ.ಸಾ.ಪ ಖಜಾಂಚಿ ಕೆ.ಎಂ. ಬಸವರಾಜ, ಸದಸ್ಯರಾದ ಶಿಕ್ಷಕಿ ಬಿ.ಜಿ. ಚೈತ್ರಾ, ಡಿ.ಎಂ. ಹಾಲಾರಾಧ್ಯ, ಜಿಲ್ಲಾ ಕಸಾಪ ಕಾರ್ಯದರ್ಶಿ ದಿಳ್ಯಪ್ಪ ಮಾತನಾಡಿದರು. ಕ.ಸಾ.ಪ ಅಧ್ಯಕ್ಷ ಜಿ. ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕು ಕನ್ನಡ ಭವನ ನಿರ್ಮಾಣಕ್ಕೆ ಸಹಕಾರ ಹಾಗೂ ಸಾರ್ವಜನಿಕ ಗ್ರಂಥಾಲಯಗಳನ್ನು ಕಸಾಪ ನಿಯಂತ್ರಣಕ್ಕೆ ಕೊಡುವಂತೆ ಮನವಿ ಮಾಡಿದರು. ಡಿ.ಎಂ. ವಿಜೇಂದ್ರ ಮಹೇಂದ್ರಕರ, ಕುಬೇರಪ್ಪ, ಚಂದ್ರಶೇಖರಪ್ಪ, ಯುನಸ್‌ಭಾಷ, ತಿಪ್ಪೇಸ್ವಾಮಿ ಅಚೆಮನೆ, ಡಿ. ರಾಜೇಂದ್ರ, ರಾಜಾರಾಂ ಮಹೇಂದ್ರಕರ್, ಕುಬೇರಪ್ಪ, ಬಸವರಾಜಪ್ಪ ಇದ್ದರು.