ನ್ಯಾಮತಿಯ ಸಮುದಾಯ ಆಸ್ಪತ್ರೆಗೆ ಎಂಪಿಆರ್ ಭೇಟಿ

ನ್ಯಾಮತಿ.ಏ.೨೯ : ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನ್ಯಾಮತಿಯ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿ ವೈದ್ಯರಿಂದ ಮಾಹಿತಿ ಪಡೆದರು..ಪಟ್ಟಣದ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಿದ್ದತೆ, ವಿತರಣೆಯ ಜೊತೆಗೆ ಕೋವಿಡ್‌ಗೆ ಸಂಬಂಧಿಸಿದಂತೆ ಆಸ್ಪತ್ರೆಯ ಸಿಬ್ಬಂದಿಗಳ ಸಿದ್ದತೆ ಕುರಿತು ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.ನ್ಯಾಮತಿ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಯ ಕೊರತೆ ಇದ್ದು ನೇಮಕಾತಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ನೇಮಕಾತಿಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದ್ದು ದೊಡ್ಡ ಆಘಾತವುಂಟು ಮಾಡಿದೆ ಎಂದ ಶಾಸಕರು, ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೈಜೋಡಿಸ ಬೇಕೆಂದು ಕರೆ ನೀಡಿದರು.ಅಧಿಕಾರಿಗಳು ಕೋವಿಡ್ ನಂತಹ ಸಂದರ್ಭದಲ್ಲಿ ಬೇಜವಾಬ್ದಾರಿ ತನವನ್ನು ಬಿಟ್ಟು ದಿನದ 24 ಘಂಟೆಯೂ ಕೆಲಸ ಮಾಡುವಂತೆ ಸೂಚಿಸಿದ ಶಾಸಕರು, ಸಾರ್ವಜನಿಕರಿಂದ ಒಂದೇ ಒಂದು ದೂರು ಬಂದರೂ ನಾನು ಸಹಿಸುವುದಿಲ್ಲಾ ಎಂದು ಎಚ್ಚರಿಕೆ ನೀಡಿದರು.ಹೊನ್ನಾಳಿಯ 100 ಹಾಸಿಗೆ ಆಸ್ಪತ್ರೆಯನ್ನು 200 ಹಾಸಿಗೆಗೆ ಹಾಗೂ ನ್ಯಾಮತಿಯ 30 ಹಾಸಿಗೆಯ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದೆರ್ಜೆಗೇರಿಸಲು ಕ್ರಮ ಕೈಗೊಂಡಿದ್ದು ನ್ಯಾಮತಿ ಆಸ್ಪತ್ರೆಯ ಬೆಡ್‌ಗಳಲ್ಲೇ ಆಕ್ಸಿಜನ್ ಸೌಲಭ್ಯ ಕಲ್ಪಿಸಲು ಸೂಚಿಸಿದ್ದೇನೆ ಎಂದರು.ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂದು ಹೇಳಿದ ಶಾಸಕರು, ಜನರು ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕರೆ ನೀಡಿದರು ಲಾಕ್‌ಡೌನ್‌ನಲ್ಲಿ ಪಾಲ್ಗೊಳ್ಳ ಬೇಕು, ಅದನ್ನ ಬಿಟ್ಟು ಮನೆಯಿಂದ ಹೊರ ಬಂದರೆ ಕೊರೊನಾ ನಿಮ್ಮ ಮನೆಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.ಕೋವಿಡ್ ನಂತರ ಬೀಕರ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದನ್ನು ಬಿಟ್ಟು ಸರ್ಕಾರದೊಂದಿಗೆ ಕೈಜೋಡಿ ಸೂಕ್ತ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭ ತಹಶೀಲ್ದಾರ್ ತನುಜಾ ಟಿ ಸವದತ್ತಿ,ಉಪತಹಶೀಲ್ದಾರ್ ನಾಗರಾಜ್,ತಾಲೂಕು ಆರೋಗ್ಯಾಧಿಕಾರಿ ಕೆಂಚಪ್ಪ,ಆಡಳಿತ ವೈದ್ಯಾಧಿಕಾರಿ ರೇಣುಕಾನಂದ ಮೆಣಸಿನಕಾಯಿ,ಇಓ ರಾಮಬೋವಿ,ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್,ಸಿ.ಕೆ.ರವಿ,ಅಜಯ್‌ಕುಮಾರ್ ನಟರಾಜ್ ಸೇರಿದಂತೆ ಮತ್ತಿತರರಿದ್ದರು.