ನ್ಯಾಟೋ ಸಭೆಗೆ ಆಸ್ಟಿನ್ ಗೈರು

ನ್ಯೂಯಾರ್ಕ್, ಫೆ.೧೩- ಮೂತ್ರಕೋಶದ ಸಮಸ್ಯೆಯಿಂದ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾ ರಕ್ಷಣಾ ಕಾರ್ಯದರ್ಶಿ (ರಕ್ಷಣಾ ಸಚಿವ) ಲಾಯ್ಡ್ ಅವರು ಇದೀಗ ನ್ಯಾಟೋ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದ ಪ್ರಮುಖ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇತ್ತೀಚಿಗಿನ ತಿಂಗಳುಗಳಲ್ಲಿ ಆಸ್ಟಿನ್ ಅವರು ಮೂರನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
೭೦ರ ಹರೆಯದ ಆಸ್ಟಿನ್ ಅವರು ವಾಷಿಂಗ್ಟನ್ ಡಿಸಿಯಲ್ಲಿರುವ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ. ಮಂಗಳವಾರದ ವೇಳೆಗೆ ಆಸ್ಟಿನ್ ಅವರು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಪೆಂಟಗಾನ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ಆಸ್ಟಿನ್ ಅವರ ಉಪಕಾರ್ಯದರ್ಶಿಯವರು ನಿರ್ವಹಿಸಲಿದ್ದಾರೆ. ಸೋಮವಾರ ಪೆಂಟಗನ್ ಬಿಡುಗಡೆ ಮಾಡಿದ ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಆಸ್ಟಿನ್ ಅವರು ದೀರ್ಘಕಾಲದ ಆಸ್ಪತ್ರೆಯ ವಾಸ್ತವ್ಯವನ್ನು ನಿರೀಕ್ಷಿಸಲಾಗಿಲ್ಲ. ಹಾಗಾಗಿ ಅವರು ಮಂಗಳವಾರದ ವೇಳೆಗೆ ತನ್ನ ಸಾಮಾನ್ಯ ಕರ್ತವ್ಯಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ? ಎಂದು ತಿಳಿಸಿದೆ.
ಆಸ್ಟಿನ್ ಈ ಹಿಂದೆ ಕೂಡ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿದ್ದರು.
ಆದರೆ ಅಮೆರಿಕಾದ ಪ್ರಮುಖ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅವರು, ಈ ಹಿಂದೆ ಯಾವ ಸಮಸ್ಯೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಈ ತನಕ ಬಿಡುಗಡೆಯಾಗಿಲ್ಲ ಎನ್ನಲಾಗಿದೆ. ಸದ್ಯ ಅವರು ಮೂತ್ರಕೋಶದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಇನ್ನು ಆಸ್ಟಿನ್ ಅವರು ಗುರುವಾರ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ನೇತೃತ್ವದಲ್ಲಿ ಬೆಲ್ಜಿಯಂನ ಬ್ರಸ್ಡೆಲ್ಸ್‌ನಲ್ಲಿರುವ ನ್ಯಾಟೋ ಪ್ರಧಾನ ಕಚೇರಿಯಲ್ಲಿ ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಬೇಕಿತ್ತು.