ನ್ಯೂಯಾರ್ಕ್, ಜು.೫- ಒಂದೆಡೆ ಉಕ್ರೇನ್ ಹಾಗೂ ರಷ್ಯಾ ನಡುವೆ ಭೀಕರ ಯುದ್ದ ಮುಂದುವರೆಯುತ್ತಿದ್ದರೆ ಮತ್ತೊಂದೆಡೆ ನ್ಯಾಟೋ ಪಡೆಯು ತನ್ನ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರ ಹುದ್ದೆಯ ಒಪ್ಪಂದದ ವ್ಯಾಪ್ತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಸದ್ಯ ನಡೆಯುತ್ತಿರುವ ಜಾಗತಿಕ ಸನ್ನಿವೇಶಗಳಿಗೆ ಅನುಗುಣವಾಗಿ ಹುದ್ದೆಯ ಅವಧಿ ವಿಸ್ತರಣೆ ಮಾಡಲಾಗಿದೆ ಎನ್ನಲಾಗಿದೆ.
ಸದ್ಯ ನಡೆಯುತ್ತಿರುವ ರಷ್ಯಾ ವಿರುದ್ಧದ ಯುದ್ದದಲ್ಲಿ ಉಕ್ರೇನ್‌ಗೆ ನ್ಯಾಟೋ ಪಡೆಗಳು ಸಕಲ ನೆರವನ್ನು ನೀಡುತ್ತಿದೆ. ಹಾಗಾಗಿ ನ್ಯಾಟೋ ಪ್ರಧಾನ ಕಾರ್ಯದರ್ಶಿ, ಅನುಭವಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರ ಜಾಗಕ್ಕೆ ಮತ್ತೊಬ್ಬನನ್ನು ನೇಮಿಸುವ ಬದಲಾಗಿ ಅವರನ್ನೇ ಮುಂದುವರೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇನ್ನು ನಾರ್ವೆ ದೇಶದ ಮಾಜಿ ಪ್ರಧಾನಮಂತ್ರಿಯಾಗಿರುವ ಜೆನ್ಸ್ ಅವರನ್ನು ೨೦೧೪ರಲ್ಲಿ ನ್ಯಾಟೋ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಆ ಬಳಿಕ ಮೂರು ಬಾರಿ ಅವರ ಹುದ್ದೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಇದೀಗ ಮತ್ತೊಂದು ವರ್ಷದ ಅವಧಿಗೆ ಮರುವಿಸ್ತರಿಸಲಾಗಿದೆ. ಹಾಗಾಗಿ ೨೦೨೪ರ ಅಕ್ಟೋಬರ್ ೧ರ ವರೆಗೆ ಜೆನ್ಸ್ ಅವರು ನ್ಯಾಟೋ ಅಧ್ಯಕ್ಷರಾಗಿ ಜೆನ್ಸ್ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.
ಮುಂದಿನ ವಾರ ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ನಡೆಯಲಿರುವ ನ್ಯಾಟೋ ಪಡೆಗಳ ಶೃಂಗಸಭೆಯಲ್ಲಿ ಜೆನ್ಸ್ ಅವಧಿಯನ್ನು ವಿಸ್ತರಿಸುವ ಬಗ್ಗೆ ಅಧಿಕೃತ ಪ್ರಕಟನೆ ಹೊರಬೀಳಲಿದೆ. ಇನ್ನು ಹುದ್ದೆ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆನ್ಸ್, ಹೊಸ ತೀರ್ಮಾನದಿಂದ ನಾನು ಗೌರವಿತನಾಗಿದ್ದೇನೆ. ಯುರೋಪ್ ಮತ್ತು ಉತ್ತರ ಅಮೆರಿಕಾ ನಡುವಿನ ಅಟ್ಲಾಂಟಿಕ್ ನಡುವಿನ ಬಂಧವು ಸುಮಾರು ೭೫ ವರ್ಷಗಳ ಕಾಲ ನಮ್ಮ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತ್ರಿಪಡಿಸಿದೆ. ಹೆಚ್ಚು ಅಪಾಯಕಾರಿ ಜಗತ್ತಿನಲ್ಲಿ ನಮ್ಮ ಮೈತ್ರಿ ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.