ನೌಕಾಪಡೆಯ ಮುಖ್ಯಸ್ಥರಾಗಿ ಹರಿಕುಮಾರ್ ಅಧಿಕಾರ ಸ್ವೀಕಾರ

ನವದೆಹಲಿ,ನ.೩೦- ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥ (ನೌಕ ಸೇನಾಧಿಪತಿಯಾಗಿ)ರಾಗಿವೈಸ್ ಅಡ್ಮಿರಲ್ ಆರ್ ಹರಿಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಆರ್ ಹರಿ ಕುಮಾರ್ ಅವರು ಭಾರತೀಯ ನೌಕಾಪಡೆಯ ಅಡ್ಮಿರಲ್ ಕರಂಬಿರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿದ್ದಾರೆ.
೩೦ ತಿಂಗಳ ಅಧಿಕಾರಾವಧಿಯ ನಂತರ ಅಡ್ಮಿರಲ್ ಕೆಬಿ ಸಿಂಗ್‌ಅವರು ಇಂದು ಸೇವೆಯಿಂದ ನಿವೃತ್ತರಾದರು.
ನೌಕಾಪಡೆಯ ನೂತನ ಮುಖ್ಯಸ್ಥ ಆರ್. ಹರಿ ಕುಮಾರ್ ಸೌತ್ ಬ್ಲಾಕ್ ಲಾನ್ಸ್ ನಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು “ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ. ಭಾರತೀಯ ನೌಕಾಪಡೆಯು ನಮ್ಮ ರಾಷ್ಟ್ರೀಯ ಕಡಲ ಹಿತಾಸಕ್ತಿ ಮತ್ತು ಸವಾಲುಗಳ ಮೇಲೆ ಕೇಂದ್ರೀಕರಿಸಿದೆ” ಎಂದು ಹೇಳಿದರು.
ಆರ್ ಹರಿ ಕುಮಾರ್ ಇದಕ್ಕೂ ಮೊದಲು ಪಶ್ಚಿಮ ನೇವಲ್ ಕಮಾಂಡ್ ಕಮಾಂಡಿಂಗ್ ಇನ್ ಚೀಫ್ (ಎಫ್‌ಒಸಿ-ಇನ್-ಸಿ) ಫ್ಲಾಗ್ ಅಧಿಕಾರಿಯಾಗಿದ್ದರು. ಅಲ್ಲದೇ ಐಎನ್‌ಎಸ್ ವಿಕ್ರಮಾದಿತ್ಯದ ಸಾಗರೋತ್ತರ ಸಮಿತಿಯ ಮುಖ್ಯಸ್ಥರಾಗಿದ್ದರು ಮತ್ತು ಗೋವಾದ ನೌಕಾ ಯುದ್ಧ ಕಾಲೇಜಿನ ಕಮಾಂಡೆಂಟ್ ಆಗಿ ನೇಮಕಗೊಂಡ ಮೊದಲ ಫ್ಲ್ಯಾಗ್ ಅಧಿಕಾರಿ ಕೂಡ ಆಗಿದ್ದರು.
ಹರಿಕುಮಾರ್ ಹಿನ್ನೆಲೆ:
೧೯೬೨ರ ಏಪ್ರಿಲ್ ೧೨ರಂದು ಜನಿಸಿದ
ಆರ್ ಹರಿ ಕುಮಾರ್ ಅವರು ೧೯೮೧ರ ಡಿಸೆಂಬರ್ ನಲ್ಲಿ ಎ-ಸ್ಕ್ವಾಡ್ರನ್, ೬೧ ಕೋರ್ಸ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವಿ ಪಡೆದರು ಮತ್ತು ೧೯೮೩ರ ಜನವರಿ ೧ರಂದು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡರು.
ಸುಮಾರು ೩೯ ವರ್ಷಗಳ ವೃತ್ತಿ ಜೀವನದಲ್ಲಿ ಹರಿ ಕುಮಾರ್ ಅವರು ವಿವಿಧ ಕಮಾಂಡರ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಹರಿ ಕುಮಾರ್ ಅವರಿಗೆ ಸಮುದ್ರ ಕಮಾಂಡ್‌ನಲ್ಲಿ ಕೋಸ್ಟ್ ಗಾರ್ಡ್ ಶಿಪ್ ಸಿ-೦೧, ಐಎನ್‌ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್‌ಎಸ್ ಕೋರಾ ಮತ್ತು ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಐಎನ್‌ಎಸ್ ರಣವೀರ್ ಸೇರಿವೆ.
ವೆಸ್ಟ್ರೆರ್ನ್ ಫ್ಲೀಟ್‌ನ ಫ್ಲೀಟ್ ಆಪರೇಷನ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಯುಎಸ್‌ನ ನೇವಲ್ ವಾರ್ ಕಾಲೇಜು, ಮಧ್ಯಪ್ರದೇಶದ ಆರ್ಮಿ ವಾರ್ ಕಾಲೇಜು ಮತ್ತು ಯುಕೆಯ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿ ಕೋರ್ಸ್‌ಗಳನ್ನು ಮಾಡಿದ್ದಾರೆ.
ಆರ್.ಹರಿಕುಮಾರ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕವನ್ನು ಲಭಿಸಿದೆ.