ನೌಕಾಧಿಕಾರಿ ಮೇಲೆ ಹಲ್ಲೆ; ೬ ಮಂದಿ ಶಿವ ಸೈನಿಕರ ಬಂಧನ

ಮುಂಬೈ, ಸೆ. ೧೨- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾರ್ಟೂನ್ ಶೇರ್ ಮಾಡಿದ್ದಾರೆ ಎಂದು ಆಕ್ರೋಶಗೊಂಡಿರುವ ಶಿವಸೇನಾ ಕಾರ್ಯಕರ್ತರು ಮಾಜಿ ನೌಕಾಪಡೆಯ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆಸಿದ ಸಂಬಂಧ ೬ ಮಂದಿ ಶಿವಸೇನಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ನೌಕಾಪಡೆಯ ಅಧಿಕಾರಿ ೬೫ ವರ್ಷದ ಮದನ್‌ಶರ್ಮಾ ಹಲ್ಲೆಗೊಳಗಾದ ವ್ಯಕ್ತಿ. ಮುಂಬೈನ ಕಂಡಿವಲ್ಯ ಪೂರ್ವದಲ್ಲಿರುವ ಅವರ ಮನೆಯ ಮುಂದೆಯೇ ಹಲ್ಲೆ ನಡೆಸಲಾಗಿದೆ. ಈ ದೃಶ್ಯ ಕಟ್ಟಡದ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಈ ಘಟನೆಯಲ್ಲಿ ಮದನ್‌ಶರ್ಮಾ ಅವರ ಕಣ್ಣಿಗೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿತ್ತು. ಈ ವಿಚಾರವಾಗಿ ದೂರು ನೀಡಿದ್ದ ಶರ್ಮಾ, ನಾನು ಉದ್ಧವ್ ಠಾಕ್ರೆಗೆ ಸಂಬಂಧಿಸಿದ ಕಾರ್ಟೂನ್‌ನನ್ನು ನಮ್ಮ ಸಮಾಜದ ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆನು. ಆನಂತರ ಕಮಲೇಶ್ ಕದಂ ಎಂಬುವರು ನನಗೆ ಕರೆ ಮಾಡಿದರು. ಜತೆಗೆ ನನ್ನ ವಿಳಾಸ ಮತ್ತು ಹೆಸರನ್ನು ತಿಳಿದುಕೊಂಡರು. ಬಳಿಕ ಆತ ಜನರನ್ನು ಕರೆದುಕೊಂಡು ನಮ್ಮ ಮನೆ ಬಳಿ ಬಂದು ತಮ್ಮನ್ನು ಮನೆಯಿಂದ ಹೊರಗೆ ಬರುವಂತೆ ನನಗೆ ಕರೆ ಮಾಡಿದ ಬಳಿಕ ನಾನು ಹೊರಗೆಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದರು.
ಸುಮಾರು ೬ ಜನರು ಸೇರಿಕೊಂಡು ಶರ್ಮಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ಗೂಂಡಾಗಳ ರಾಜನೀತಿಯನ್ನು ನಿಲ್ಲಿಸಿ ಉದ್ಧವದ ಠಾಕ್ರೆ ಅವರೇ, ಈ ಗೂಂಡಾಗಳಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ೬ ಮಂದಿ ಗೂಂಡಾಗಳನ್ನು ಪೊಲೀಸರು ಬಂಧಿಸಿದ್ದಾರೆ.