ದಾವಣಗೆರೆ,ಮೇ.೩೧- ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಸಹ ದೃತಿಗೆಡೆದ ಕಠಿಣ ಪರಿಶ್ರಮ ಪಟ್ಟು ಯುವತಿಯೊಬ್ಬಳು ಇದೀಗ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ನೌಕಾದಳಕ್ಕೆ ಆಯ್ಕೆಯಾದ ಏಕೈಕ ಯುವತಿ. ಈಕೆಯ ಸಾಧನೆಯನ್ನು ಕಂಡು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭೂಮಿಕಾ ಎಂಬ ಯುವತಿ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡಿದ್ದರು. ಆದರೆ ತಾಯಿ ಮಗಳಿಗಾಗಿ ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿ ದುಡಿದು ಉತ್ತಮ ಶಿಕ್ಷಣ ನೀಡಿದ್ದರ ಪರಿಣಾಮ ಇಂದು ಆಕೆ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾಳೆ.
ಫಾರ್ಮಸಿ ವ್ಯಾಸಂಗ ಮಾಡಿರುವ ಭೂಮಿಕಾ ಸಾಕಷ್ಟು ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಿದ್ದರು. ಭೂಮಿಕಾ ನಿಷ್ಠೆಯಿಂದ ಓದಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ಕೇರಳದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸದ್ಯ ನೌಕಾದಳದ ಮೊದಲನೇ ಪಟ್ಟಿಯಲ್ಲೇ ಇವರ ಹೆಸರು ಬಂದಿದ್ದು, ಕುಟುಂಬದ ಸಂತಸವನ್ನು ಹಿಮ್ಮಡಿಗೊಳಿಸಿದೆ.