ನೌಕರಿ ಗಿಟ್ಟಿಸಲು ತಾಯಿ ಸಾಯಿಸಿ ಸುಳ್ಳು ಹೇಳಿದ ಖದೀಮನ ಬಂಧನ

ನವದೆಹಲಿ,ಜೂ.೯-ಸಾಮಾನ್ಯ ನೌಕರಿ ಗಿಟ್ಟಿಸಿಕೊಳ್ಳುವುದಕ್ಕೆ ಹಲವರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಇನ್ನು ಸರ್ಕಾರಿ ನೌಕರಿ ಅಂದರೆ ಕಬ್ಬಿಡದ ಕಡಲೆ ಇದ್ದಂತೆ ಸಾಕಷ್ಟು ಪರಿಶ್ರಮ ಹಾಕಿದರೂ ಸರ್ಕಾರಿ ಕೆಲಸ ಸಿಗದೇ ಹಲವು ಯುವಕರು ಬೀದಿ ಬೀದಿಯಲ್ಲಿ ಅಲೆದಾಡುವಂತ ದುಸ್ಥಿತಿ ಇದೆ. ಆದರೆ ಇಲ್ಲೊಬ್ಬ ಖದೀಮ ಸರ್ಕಾರಿ ನೌಕರಿ ಪಡೆಯಲು ತನ್ನ ತಾಯಿಯೇ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಇತ್ತೀಚಿಗೆ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ತನ್ನ ತಾಯಿ ಕೂಡ ಸತ್ತು ಹೋಗಿದ್ದಾರೆ ಎಂದು ಪಾಟ್ನಾದ ನಿವಾಸಿಯೊಬ್ಬ ಅಧಿಕಾರಿಗಳ ಮುಂದೆ ಸುಳ್ಳು ಹೇಳಿದ್ದಾನೆ.
ಬಾಲಾಸೋರ್ ರೈಲು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ತಾನು ಕೂಡ ಸರ್ಕಾರಿ ನೌಕರಿ ಪಡೆಯಬೇಕೆಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಿದ್ದಾಗಿ ವ್ಯಕ್ತಿ ತಿಳಿಸಿದ್ದಾನೆ.
ಈ ಸಂದರ್ಭದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಅವನ ತಾಯಿ ೨೦೧೮ರಲ್ಲಿಯೇ ನಿಧನ ಹೊಂದಿದ್ದರ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ವ್ಯಕ್ತಿಯನ್ನು ಪಾಟ್ನಾದ ಸಂಜಯ್ ಕುಮಾರ್ ಎಂದು ಗುರುತಿಲಾಗಿದೆ. ಇವನು ಗುರುವಾರದಂದು ಸಚಿವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ. ಆಗ ರೈಲು ಭವನದಲ್ಲಿ ಅವರನ್ನು ಕಾಣಲು ತಿಳಿಸಲಾಗಿದೆ. ಬಳಿಕ ಆತ ಸಚಿವರ ಕಚೇರಿಗೆ ತೆರಳಿದ್ಧಾನೆ. ಅಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಾಗ ಅವನ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ತನ್ನ ತಾಯಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅಪಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಇದಕ್ಕೆ ಅಧಿಕಾರಿಗಳು ನಿಮ್ಮ ತಾಯಿಯ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿ, ಸಾಕ್ಷ್ಯಗಳನ್ನು ಒದಗಿಸಿ ಎಂದು ಕೇಳಿದಾಗ ಸಂಜಯ್ ಕುಮಾರ್ ಉತ್ತರಿಸದೇ ಸುಮ್ಮನಾಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ತಾನು ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದೆ, ಅವನ ಹೆಸರು ನೆನಪಿಲ್ಲ. ಅಲ್ಲದೆ ಸೀಟ್ ವೇಟಿಂಗ್ ಲಿಸ್ಟ್‌ನಲ್ಲಿತ್ತು ಎಂದು ಹೇಳಲು ಪ್ರಯತ್ನಿಸಿದ್ದಾನಾದರೂ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸುವಲ್ಲಿ ವಿಫಲನಾಗಿದ್ದಾನೆ. ಹೀಗಾಗಿ ಅಧಿಕಾರಿಗಳಿಗೆ ಅನುಮಾನ ದಟ್ಟವಾಗಿದ್ದರಿಂದ ಅವನನ್ನು ಕೂಡಲೇ ಬಂಧಿಸಿದ್ದಾರೆ.