ನೌಕರಿಗಾಗಿ ಓಡುವುದಕ್ಕಿಂತ ಸುಖಮಯ ನೆಮ್ಮದಿ ಜೀವನಕ್ಕಾಗಿ ಯುವಕರು ಪ್ರಯತ್ನಿಸಲು ಬಸವರಾಜ್ ಪಾಟೀಲ್ ಕರೆ

ಕಲಬುರಗಿ,ಜ.21:ವಿದ್ಯಾರ್ಥಿಗಳು ಜೀವನದಲ್ಲಿ ಕೇವಲ ನೌಕರಿಯ ಹಿಂದೆ ಓಡುವುದಕ್ಕಿಂತ ಸುಖಮಯ ನೆಮ್ಮದಿಯ ಜೀವನಕ್ಕಾಗಿಯೂ ಪ್ರಯತ್ನಪಡಬೇಕು ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೊತ್ತಲ ಬಸವೇಶ್ವರ್ ಶಿಕ್ಷಣ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ಕರೆ ನೀಡಿದರು.
ನಗರದ ರಾಮ ಮಂದಿರದ ಹಿಂಬದಿಯಲ್ಲಿರುವ ಹರಳಯ್ಯ ಸಮಾಜ ಸಭಾ ಭವನದಲ್ಲಿ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಬಹುತೇಕ ಯುವಕರು ನೌಕರಿಯ ಹಿಂದೆ ಓಡುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಓದುತ್ತಾರೆ. ಅದಕ್ಕಾಗಿ ಅವರ ತಂದೆ, ತಾಯಿಯೂ ಕೂಡ ಕಷ್ಟಪಡುತ್ತಾರೆ. ಆದಾಗ್ಯೂ, ಇಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೌಕರಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ 12 ಲಕ್ಷ ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆ ಬರೆದರೆ ಕೇವಲ 700 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗುತ್ತಾರೆ. ಅನುತ್ತೀರ್ಣರಾದ ಲಕ್ಷಾಂತರ ವಿದ್ಯಾರ್ಥಿಗಳು ಮನೆ ಮತ್ತು ಜಮೀನು, ತಂದೆ, ತಾಯಿಗಳನ್ನು ಹಾಗೂ ಸಂಬಂಧಿಕರನ್ನು ಕಳೆದುಕೊಂಡು ದೂರವಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಹುತೇಕರು ಇಂಗ್ಲೀಷ್ ಭಾಷೆಯ ಸಮಸ್ಯೆಯಿಂದಾಗಿ ನಮ್ಮ ಭಾಗದ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಅಭ್ಯಾಸಿಸಲು ಬರುತ್ತಿಲ್ಲ ಎಂದು ಹೇಳಿದ ಅವರು, ದೇಶದಲ್ಲಿ ನಡೆಯುತ್ತಿರುವ ವರ್ತಮಾನದ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಸಲಹೆ ಮಾಡಿದರು.
ಇಂದಿನ ದಿನಗಳು ತುಂಬಾ ಸ್ಪರ್ಧಾತ್ಮಕವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಸ್ಪರ್ಧೆಯನ್ನು ಎದುರಿಸಲು ಉನ್ನತವಾದ ತಯಾರಿ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣವನ್ನು ತುಂಬಾ ಪ್ರಾಮಾಣಿಕತೆಯಿಂದ ಮತ್ತು ಪ್ರಯೋಗಾತ್ಮಕ ನೆಲೆಯಲ್ಲಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ಹಿರೇಮಠ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಮಾಜಿಕ ಮುತ್ಸದ್ದಿ ಚಂದ್ರಕಾಂತ್ ಸಿರಗಾಪೂರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ದಿಲೀಪ್ ಆರ್. ಪಾಟೀಲ್, ಕಾಲೇಜಿನ ಗೌರವಾಧ್ಯಕ್ಷ ಚಂದ್ರಕಾಂತ್ ಎನ್. ದೇಸಾಯಿ, ಶಿಕ್ಷಣ ಇಲಾಖೆಯ ಭೀಮಾಶಂಕರ್ ಇಂಗಳೆ, ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ, ಪತ್ರಕರ್ತ ಸೂರ್ಯಕಾಂತ್ ಜಮಾದಾರ್, ಕಾರ್ಯದರ್ಶಿ ಜಗನ್ನಾಥ್ ನಾಗೂರ್ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ನಿಂಗಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಶಿ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.