ನೌಕರರ ಸೇವಾ ನಡತೆ ನಿಯಮ: ಹಿಂಪಡೆಯಲು ಒತ್ತಾಯ

ರಾಯಚೂರು,ನ.೧೦-ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ೨೦೨೦ರ ಕರಡು ಅಂಶಗಳಲ್ಲಿ೨೬ ನಿಯಮಗಳನ್ನು ಸೇರಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಅದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ ನಿಯಮಗಳನ್ನು 2020ರ ಕರಡು ಅಂಶಗಳು ಸರ್ಕಾರಿ ನೌಕರರ ವಿರುದ್ಧವಾಗಿದ್ದು ಕೂಡಲೇ ಅವುಗಳನ್ನು ಹಿಂಪಡೆಯಬೇಕು‌. ಈ ಕರಡು ಅಂಶದಲ್ಲಿ 26 ನಿಯಮಗಳನ್ನು ಸೇರಿಸಿದ್ದು ಇವೆಲ್ಲ ಸರ್ಕಾರಿ ನೌಕರರ ವಿರುದ್ಧವಾಗಿವೆ. ಮುಖ್ಯವಾಗಿ ಸರ್ಕಾರಿ ನೌಕರರು ನಿಯಮ ೬ರ ಪ್ರಕಾರ ಕ್ರೀಡಾ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸುವಂತಿಲ್ಲ, ನಿಯಮ 9ರ ಪ್ರಕಾರ ಬಹಿರಂಗ ಸಭೆ ಹಾಗೂ ಮುಷ್ಕರಗಳಲ್ಲಿ ಭಾಗವಹಿಸುವಂತಿಲ್ಲ, ನಿಯಮ ೧೦ರ ಪ್ರಕಾರ ಆಕಾಶವಾಣಿ, ಪತ್ರಿಕೆ, ದೂರದರ್ಶನ ಮುಂತಾದವುಗಳಲ್ಲಿ ಲೇಖನ ಅನಿಸಿಕೆಗಳನ್ನು ಸರ್ಕಾರದ ಅನುಮತಿ ಇಲ್ಲದೆ ಪ್ರಕಟಿಸುವಂತಿಲ್ಲ. ಸೇರಿದಂತೆ ಹಲವು ನಿಯಮಗಳ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಇವು ಸರ್ಕಾರಿ ನೌಕರರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಅವರ ಕುಟುಂಬ ಸದಸ್ಯರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ಈ ಕರಡನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ನೌಕರರ ನಡತೆಯನ್ನು ನಿಯಂತ್ರಿಸಿ ಆಮೂಲಕ ಉತ್ತಮ ಪ್ರಜಾಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸುವುದು ಬಹುಮುಖ್ಯವೆ ಆದರೂ ಬ್ರಿಟಿಷ್ ಕಾಲದ ವಸಾಹತು ಮನೋಧೋರಣೆಯ ಅಂಶಗಳನ್ನು ಪರಿಷ್ಕರಿಸಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದು ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉದ್ದೇಶದ ನಿಯಮಗಳ ಜಾರಿ ಪ್ರಸ್ತಾವವನ್ನು ಸರ್ಕಾರವು ಸಂಪೂರ್ಣವಾಗಿ ಕೈಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕ ತಾಯರಾಜ ಮರ್ಚಟಾಳ್, ಉಪಾಧ್ಯಕ್ಷ ನಾರಾಯಣ, ರಮೇಶ್, ಹನುಮಂತಪ್ಪ , ನಾಗರಾಜು, ಹನುಮಂತ ಸೀಕಲ್, ಅಮರೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.