
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.02: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದ ಬೆಳಗಿನ ಅವಧಿಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ದೊರೆಯದೇ ರೋಗಿಗಳು ಪರದಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯೆ ಮೇರೆಗೆ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಿದರು. ಹೊರ ರೋಗಿಗಳ ವಿಭಾಗ ಬೆಳಗ್ಗೆಯಿಂದಲೇ ಮುಚ್ಚಲ್ಪಟ್ಟಿತ್ತು. ತುರ್ತು ಚಿಕಿತ್ಸೆ ಹೊರತಾಗಿ ಯಾವುದೇ ಆರೋಗ್ಯ ಸೇವೆಗಳು ದೊರೆಯಲಿಲ್ಲ. ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಿದರು.
ರಾಜ್ಯ ನೌಕರರ ಸಂಘ ಮಧ್ಯಾಹ್ನದ ವೇಳೆಗೆ ಮುಷ್ಕರ ವಾಪಾಸ್ ಪಡೆದಿದ್ದರಿಂದ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದರು. ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಇತರೆ ಸರ್ಕಾರಿ ಕಚೇರಿಗಳೆಲ್ಲ ಬೆಳಗಿನ ಅವಧಿಯಲ್ಲಿ ಬಂದ್ ಆಗಿದ್ದವು. ಮಧ್ಯಾಹ್ನ ಮುಷ್ಕರ ವಾಪಾಸ್ ಪಡೆದ ಬಳಿಕ ಕೆಲವರು ಕರ್ತವ್ಯಕ್ಕೆ ಮರಳಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಅಶೋಕ, ಮಾಜಿ ಅಧ್ಯಕ್ಷ ಎ.ಕೊಟ್ರಗೌಡ ಸಂಘದ ಆವರಣದಲ್ಲಿ ಎಲ್ಲ ನಿರ್ದೇಶಕರೊಂದಿಗೆ ಸಭೆ ನಡೆಸಿ, ತಾಲೂಕಿನಲ್ಲಿ ಮುಷ್ಕರ ಯಶಸ್ವಿಗೊಳಿಸುವ ಕುರಿತು ಚರ್ಚೆ ನಡೆಸಿದರು.