ನೌಕರರ ಮುಷ್ಕರ ಕೆಎಸ್‌ಆರ್‌ಟಿಸಿಗೆ 287 ಕೋಟಿ ನಷ್ಟ

ಬೆಂಗಳೂರು, ಏ. ೨೨- ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ೧೫ ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು ೨೮೭ ಕೋಟಿ ರೂ.ಗಳು ಆದಾಯ ನಷ್ಟವಾಗಿದೆ.
ಈಗಾಗಲೇ ಸಂಸ್ಥೆ ನಷ್ಟದಲ್ಲಿದ್ದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಮುಷ್ಕರ ನಡೆಸಿದ್ದರಿಂದ ನಷ್ಟ ಉಂಟಾಗಿದೆ. ಕೆಎಸ್‌ಆರ್‌ಟಿಸಿ ನಿಗಮಕ್ಕೆ ೧೨೨.೫೦ ಕೋಟಿ ರೂ. ನಷ್ಟವಾಗಿದ್ದು ಇದರಿಂದ ನಿಗಮಕ್ಕೆ ಬಾರಿ ಹೊಡೆತ ಬಿದ್ದಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ೪೫ ಕೋಟಿ ಈಶಾನ್ಯ ಸಾರಿಗೆ ನಿಗಮಕ್ಕೆ ೫೭.೫೦ ಹಾಗೂ ವಾಯುವ್ಯ ನಿಗಮಕ್ಕೆ ೬೨ ಕೋಟಿ ರೂ. ನಷ್ಟವಾಗಿದೆ.
ತರಬೇತಿ ಹಂತದಲ್ಲಿದ್ದ ೯೯೫ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಒಟ್ಟು, ನಾಲ್ಕು ಸಾರಿಗೆ ನಿಗಮಗಳಿಂದ ೨೯೪೧ ನೌಕರರನ್ನು ಅಮಾನತ್ತು ಮಾಡಲಾಗಿದೆ. ೭೬೬೬ ನೌಕರರಿಗೆ ನೋಟೀಸ್ ನೀಡಲಾಗಿದೆ.
ನಾಲ್ಕು ಸಾರಿಗೆ ನಿಗಮದಿಂದ ಪ್ರತಿದಿನ ೧೭ ಕೋಟಿ ಆದಾಯ ಬರುತ್ತಿತ್ತು. ಕೆಎಸ್‌ಆರ್‌ಟಿಸಿಗೆ ಪ್ರತಿದಿನ ೭ ಕೋಟಿ ರೂ. ಆದಾಯ ಬರುತ್ತಿತ್ತು. ಯುಗಾದಿ ಹಬ್ಬದ ಸಂದರ್ಭದಲ್ಲೇ ಮುಷ್ಕರ ನಡೆಸಿದ್ದರಿಂದ ಎರಡೇ ದಿನದಲ್ಲಿ ೪೪ ಕೋಟಿ ನಷ್ಟವಾಗಿತ್ತು. ಬಿಎಂಟಿಸಿಯಿಂದ ಪ್ರತಿ ನಿತ್ಯ ೩ ಕೋಟಿ ರೂ. ಆದಾಯ ಬರುತ್ತಿತ್ತು.
೬ನೇ ವೇತನ ಆಯೋಗ ಜಾರಿ ಸೇರಿದಂತೆ ಇತರ ಬೇಡಿಕೆಗಳಿಗೆ ಒತ್ತಾಯಿಸಿ ಏ. ೭ ರಿಂದ ೨೧ ರವರೆಗೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಹೈಕೋರ್ಟ್ ಆದೇಶದಂತೆ ಸಾರಿಗೆ ನೌಕರರ ಒಕ್ಕೂಟ ಮುಷ್ಕರವನ್ನು ವಾಪಸ್ ಪಡೆದುಕೊಂಡಿತ್ತು.