ನೌಕರರ ಮುಷ್ಕರ ಅಂತ್ಯಕ್ಕೆ ಚೆವ್ರಾನ್ ಹೊಸ ಒಪ್ಪಂದ

ಮೆಲ್ಬೊರ್ನ್, ಸೆ.೨೨- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿಯಲ್ಲಿ ನಿರತರಾಗಿದ್ದ ಎನರ್ಜಿ ದೈತ್ಯ ಸಂಸ್ಥೆ ಚೆವ್ರಾನ್ ಮತ್ತು ಯೂನಿಯನ್ಸ್ ನೌಕರರ ಜೊತೆ ಇದೀಗ ಕಂಪೆನಿ ಒಪ್ಪಂದ ಮಾಡಿಕೊಂಡಿದ್ದು, ಬೇಡಿಕೆಗಳಿಗೆ ಸ್ಪಂದಿಸಲು ಒಪ್ಪಿಗೆ ಸೂಚಿಸಿದೆ. ಇದರಿಂದ ಸಹಜವಾಗಿಯೇ ಯುರೋಪ್ ರಾಷ್ಟ್ರಗಳಲ್ಲಿ ತಲೆದೋರಿದ್ದ ಗ್ಯಾಸ್ ಸಂಬಂಧಿತ ಅನಿಶ್ಚಿತತೆ ನಿವಾರಣೆಯಾದಂತಾಗಿದೆ.
ದೇಶದ ಕಾರ್ಮಿಕ ನಿಯಂತ್ರಕ ಇಲಾಖೆ ಮುಂದಿಟ್ಟಿರುವ ಪ್ರಸ್ತಾವಿತ ಒಪ್ಪಂದವನ್ನು ಕಾರ್ಮಿಕರು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಕೈಗಾರಿಕಾ ಕ್ರಮವನ್ನು ಈಗ ಸ್ಥಗಿತಗೊಳಿಸಲಾಗುವುದು ಎಂದು ಎರಡು ಒಕ್ಕೂಟಗಳ ಗುಂಪಾಗಿರುವ ಆಫ್‌ಶೋರ್ ಅಲೈಯನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ತಡರಾತ್ರಿಯ ಸಾಮೂಹಿಕ ಸಭೆಯಲ್ಲಿ ಸದಸ್ಯರು ಫೇರ್ ವರ್ಕ್ ಕಮಿಷನ್‌ನ ಶಿಫಾರಸುಗಳನ್ನು ಒಳಗೊಂಡಿರುವ ಇತ್ತೀಚಿನ ಕೊಡುಗೆಯನ್ನು ಅನುಮೋದಿಸಿದರು. ಆಫ್‌ಶೋರ್ ಅಲೈಯನ್ಸ್ ಈಗ ಒಪ್ಪಂದದ ಕರಡು ರಚನೆಯನ್ನು ಅಂತಿಮಗೊಳಿಸಲು ಚೆವ್ರಾನ್‌ನೊಂದಿಗೆ ಕೆಲಸ ಮಾಡುತ್ತಿದ್ದು, ಸದಸ್ಯರು ಪ್ರಸ್ತುತ ಕೈಗಾರಿಕಾ ಕ್ರಮವನ್ನು ಶೀಘ್ರದಲ್ಲೇ ರಚನೆ ಮಾಡಲಿದ್ದಾರೆ ಎಂದು ಆಫ್‌ಶೋರ್ ಅಲೈಯನ್ಸ್‌ನ ವಕ್ತಾರ ಬ್ರಾಡ್ ಗ್ಯಾಂಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಎರಡು ದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸೌಲಭ್ಯಗಳಲ್ಲಿ ಮುಷ್ಕರದಿಂದ ಯುರೋಪ್ ರಾಷ್ಟ್ರಗಳಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಯುರೋಪ್‌ನ ಹಲವು ರಾಷ್ಟ್ರಗಳಿಗೆ ಗ್ಯಾಸ್ ಪೂರೈಕೆ ಮಾಡುತ್ತಿರುವ ಸಂಸ್ಥೆಯ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸದ್ಯ ನೌಕರರ ಬೇಡಿಕೆಗಳಿಗೆ ಸ್ಪಂದಿಸಲು ಕಂಪೆನಿ ಮುಂದಾಗಿದೆ. ಸೆಪ್ಟೆಂಬರ್ ೮ರಿಂದ ವೇತನ ಮತ್ತು ಷರತ್ತುಗಳ ಮೇಲಿನ ಸಂಬಂಧಿಸಿದಂತೆ ಗೋರ್ಗಾನ್ ಮತ್ತು ವೀಟ್‌ಸ್ಟೋನ್‌ನಲ್ಲಿರುವ ಸಿಎನ್‌ಜಿ ಪ್ಲ್ಯಾಂಟ್‌ಗಳಲ್ಲಿನ ನೌಕರರು ಮುಷ್ಕರದಲ್ಲಿ ನಿರತರಾಗಿದ್ದರು. ಹೊಸ ಒಪ್ಪಂದದ ಬಗ್ಗೆ ಚೆವ್ರಾನ್ ಆಸ್ಟ್ರೇಲಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕಾ ಮೂಲದ ಗೋರ್ಗಾನ್ ಮತ್ತು ವೀಟ್‌ಸ್ಟೋನ್‌ನಲ್ಲಿರುವ ಸಿಎನ್‌ಜಿ ಪ್ಲ್ಯಾಂಟ್‌ಗಳಲ್ಲಿ ಜಗತ್ತಿನ ಐದು ಪ್ರತಿಶತ ಎಲ್‌ಎನ್‌ಜಿ ಉತ್ಪಾದನೆ ಮಾಡಲಾಗುತ್ತಿದೆ. ಆಸ್ಟ್ರೇಲಿಯಾದ ಇಂಡಸ್ಟ್ರಿಯಲ್ ಆರ್ಬಿಟ್ರೇಟರ್ ಫೇರ್ ವರ್ಕ್ ಕಮಿಷನ್, ಕಂಪೆನಿ ಮತ್ತು ಯೂನಿಯನ್ ಪ್ರತಿನಿಧಿಗಳ ನಡುವೆ ಮಧ್ಯಸ್ಥಿಕೆ ಮಾತುಕತೆಗಳನ್ನು ಆಯೋಜಿಸಿತ್ತು.