ನೌಕರರ ಗೈರು, ಕಲಬುರಗಿಯಲ್ಲಿ ಬಿಕೋ ಎಂದ ಸರ್ಕಾರಿ ಕಚೇರಿಗಳು

ಕಲಬುರಗಿ,ಮಾ.1: ವೇತನ ಭತ್ಯೆ ಪರಿಷ್ಕರಣೆ ಮತ್ತು ಓ.ಪಿ.ಎಸ್ ಜಾರಿಗೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ರಾಜ್ಯ ಸರ್ಕಾರಿ ನೌಕರರ ಸಂಘವು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ವಿಭಾಗೀಯ ಸ್ಥಾನವಾದ ಕಲಬುರಗಿ ನಗರದಲ್ಲಿ ಬಹುತೇಕ ಸರ್ಕಾರಿ ಕಚೇರಿಗಳು ಸಿಬ್ಬಂದಿಗಳಿಲ್ಲದೆ ಬಿಕೋ ಎಂದವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ತಡರಾತ್ರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರೊಂದಿಗೆ ಮಾತುಕತೆ ನಡೆಸಿದರು, ಯಾವುದೇ ಫಲಪ್ರದವಾಗದ ಕಾರಣ ನೌಕರರು ಇಂದು ಗೈರಾಗುವ ಮೂಲಕ ಮುಷ್ಕರಕ್ಕೆ ಕರೆ ನೀಡಿದ್ದಾರೆ..

ತಡರಾತ್ರಿವರೆಗೂ ನೌಕರರ ಸಂಘದೊಂದಿಗೆ ಸರ್ಕಾರ ಮಾತುಕತೆ ಮಂದುವರೆಸಿದ ಪರಿಣಾಮ ಗೊಂದಲದಿಂದ ಕೆಲವು ನೌಕರರು ಬುಧವಾರ ಕಚೇರಿಗೆ ಧಾವಿಸಿದಾದರು, ಕಚೇರಿ ಕೆಲಸಕ್ಕೆ ಹಾಜರಾಗಲಿಲ್ಲ. ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ರಾಜು ಲೇಂಗಟಿ ನೇತೃತ್ವದ ಜಿಲ್ಲಾ ಸಂಘದ ಪದಾಧಿಕಾರಿಗಳು ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ನೌಕರ ಬಂಧುಗಳಲ್ಲಿ ಮನವಿ ಮಾಡಿದರು. ಇದಕ್ಕೆ ನೌಕರರಿಂದ ಸಂಪೂರ್ಣ ಸಹಕಾರ ದೊರೆತ ಪರಿಣಾಮ ಸರ್ಕಾರಿ ಕಚೇರಿಗಳು ಭಾಗಶ: ಬಂದ್ ಆಗಿ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು.

ಸರ್ಕಾರಿ ಕಚೇರಿಗಳಿಗೆ ವಿವಿಧ ಸೇವೆಗೆ ಬಂದ ಸಾರ್ವಜನಿಕರು, ಸಿಬ್ಬಂದಿಗಳು ಇಲ್ಲದಿರುವುದನ್ನು ನೋಡಿ ಬಂದ ದಾರಿಗೆ ಸುಂಕವಿಲ್ಲವಂತೆ ವಾಪಸ್ ಆದರು.

ರಾಜು ಲೇಂಗಟಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಮಠಪತಿ, ಚಂದ್ರಕಾಂತ ಏರಿ, ಬಾಬು ಮೌರ್ಯ, ಹಣಮಂತರಾಯ ಗೊಳಸಾರ, ಸತೀಷ್ ಸಜ್ಜನ್ ಸೇರಿದಂತೆ ಅನೇಕ ಪದಾಧಿಕಾರಿಗಳು ಡಿ.ಸಿ. ಕಚೇರಿ, ಜಿ.ಪಂ., ಆರೋಗ್ಯ, ಲೋಕೋಪಯೋಗಿ, ಆಸ್ಪತ್ರೆ, ಐ.ಟಿ.ಐ., ಸ್ಥಳೀಯ ಲೆಕ್ಕಪರಿಶೋಧನೆ, ಜಿ.ಡಿ.ಎ. ಕಚೇರಿಗಳಿಗೆ ಭೇಟಿ ನೀಡಿ ಮುಷ್ಕರ ಕುರಿತು ನೌಕರರಿಗೆ ಮಾಹಿತಿ ನೀಡಿದರು.