ನೌಕರರ ಕೊರತೆ: ಏರ್ ಇಂಡಿಯಾದ ೭೮ ವಿಮಾನ ರದ್ದು

ನವದೆಹಲಿ,ಮೇ.೮- ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಗಳು ತಮ್ಮ ೭೮ ವಿಮಾನಗಳನ್ನು ಹಠಾತ್ ರದ್ದುಗೊಳಿಸಿವೆ. ನೌಕರರ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಏರ್‌ಲೈನ್ಸ್‌ನ ಎಲ್ಲಾ ಸಿಬ್ಬಂದಿ ಒಟ್ಟಾಗಿ ಸಾಮೂಹಿಕ ಅನಾರೋಗ್ಯ ನೆಪ ಒಡ್ಡಿ ರಜೆ ಮೇಲೆ ತೆರಳಿದ್ದಾರೆ. ಅದರ ನಂತರ ಕಂಪನಿಯು ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.ಮೂಲಗಳ ಪ್ರಕಾರ, ಈ ನೌಕರರು ರಜೆಗಾಗಿ ಯಾವುದೇ ಸೂಚನೆಯನ್ನೂ ನೀಡಿಲ್ಲ ಎನ್ನಲಾಗಿದೆ.
ಮಧ್ಯಪ್ರಾಚ್ಯ ಮತ್ತು ಗಲ್ಫ್ ದೇಶಗಳಿಂದ ಹೆಚ್ಚಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಹಿರಿಯ ಸಿಬ್ಬಂದಿಗಳು ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ರಜೆಯ ಮೇಲೆ ಹೋಗುವುದರಿಂದ ಅನೇಕ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ.ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ೭೮ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ ಹೆಚ್ಚಿನ ವಿಮಾನಗಳು ಮಧ್ಯಪ್ರಾಚ್ಯ ಮತ್ತು ಗಲ್ಫ್ ದೇಶಗಳಿಗೆ. ಅಲ್ಲದೆ ಹಲವು ವಿಮಾನಗಳು ತಡವಾಗಿ ಸಂಚರಿಸುತ್ತಿವೆ.
ಮೂಲಗಳ ಪ್ರಕಾರ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಡುವೆ ವಿಲೀನದ ಸುದ್ದಿ ಇದೆ. ಈ ಬಗ್ಗೆ ನೌಕರರಲ್ಲಿ ಆಕ್ರೋಶವಿದ್ದು, ಅವರಲ್ಲಿ ಹೆಚ್ಚಿನ ವರ್ಗ ಈ ನಿರ್ಧಾರವನ್ನು ನಿರಂತರವಾಗಿ ವಿರೋಧಿಸುತ್ತಿದೆ.
ಇದರಿಂದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸಂಪೂರ್ಣ ವ್ಯವಸ್ಥೆಯು ಕುಸಿದಿದೆ. ಇಷ್ಟೊಂದು ಸಂಖ್ಯೆಯ ಸಿಬ್ಬಂದಿಯನ್ನು ಏಕಾಏಕಿ ಕಡಿತಗೊಳಿಸಿರುವುದರಿಂದ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅನೇಕರು ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಎಲ್ಲದಕ್ಕೂ ಮಿಗಿಲಾಗಿ ಒಟ್ಟಿಗೆ ರಜೆ ಹಾಕಿ ಸಂಸ್ಥೆಯನ್ನು ಹಿಮ್ಮೆಟ್ಟಿಸುವ ಈ ತಂತ್ರದ ಹಿಂದೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿಬ್ಬಂದಿಯ ಉದ್ದೇಶ ಏನಿರಬಹುದು ಎಂದು ತನಿಖೆ ಆರಂಭಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ನೀಡಲಾಗಿದೆ.