ನೌಕರರ ಕಡ್ಡಾಯ ಹಾಜರಾತಿಗೆ ಆದೇಶ


ಗದಗ ಏ.23: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವಿವಿಧ 18 ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ರಜೆ ರಹಿತವಾಗಿ ತಪ್ಪದೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಸುತ್ತೋಲೆ ಹೊರಡಿಸಿದ್ದಾರೆ.
ಅಗತ್ಯ ಸೇವೆಗಳೆಂದು ಪರಿಗಣಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ವೈದ್ಯಕೀಯ ಶಿಕ್ಷಣ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ನಗರಾಭಿವೃದ್ಧಿ , ಆಹಾರ ಮತ್ತು ನಾಗರಿಕ ಪೂರೈಕೆ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಾರಿಗೆ , ಇಂಧನ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ , ರಾಜ್ಯದ ಎಲ್ಲ ಖಜಾನೆ ಮತ್ತು ಆರ್ಥಿಕ ಇಲಾಖೆ , ಪಶು ಸಂಗೋಪನೆ , ಮೀನುಗಾರಿಕೆ, ಅರಣ್ಯ ಪರಿಸರ, ಎಪಿಎಂಸಿ, ಕೃಷಿ, ಕಾರ್ಮಿಕ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಕೇಂದ್ರ ಸ್ಥಾನದಲ್ಲಿ ಸದಾ ಲಭ್ಯರಿದ್ದು ಕೋವಿಡ್ -19 ಕರ್ತವ್ಯಕ್ಕೆ ನಿಯೋಜಿಸಿದಲ್ಲಿ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ಎಲ್ಲ ಕಚೇರಿಗಳು , ಅರೆ ಸರ್ಕಾರಿ ಸ್ವಾಯುತ್ತ ಸಂಸ್ಥೆ, ನಿಗಮ, ಮಂಡಳಿ, ಪ್ರಾಧಿಕಾರ ಕಚೇರಿಗಳು ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಉಳಿದ ಶೇ. 50 ಸಿಬ್ಬಂದಿಯನ್ನು ಕೋವಿಡ್ ನಿರ್ವಹಣಾ ಕಾರ್ಯಕ್ಕೆ ನಿಯೋಜಿಸುವಂತೆ ತಿಳಿಸಲಾಗಿದೆ. ಅಂಧ ಹಾಗೂ ವಿಕಲಚೇತನ, ಗರ್ಭಿಣಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕಚೇರಿ ಹಾಜರಿಯಿಂದ ವಿನಾಯತಿ ಕೊಡಲಾಗಿದೆ. ಈ ಆದೇಶ ಮೇ 4 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.