ನೌಕರರಿಗೆ ತಪ್ಪದ ವೇತನ ವಿಳಂಬ-ಜಿಲ್ಲಾಡಳಿತದ ದಿವ್ಯ ಮೌನ

ಕೋಲಾರ, ಮೇ.೪: ಕೋವಿಡ್ ನೆಪವೊಡ್ಡಿ ಸದಾ ಬಂದ್ ಆಗಿರುವ ಜಿಲ್ಲಾ ಖಜಾನೆ ಅಧಿಕಾರಿಗಳ ಧೋರಣೆಯಿಂದಾಗಿ ‘ದೇವರು ವರಕೊಟ್ಟರೂ ಪೂಜಾರಿ ಕೊಡ ಎಂಬಂತೆ ಪ್ರತಿ ತಿಂಗಳು ವೇತನ ವಿಳಂಬದ ಸಂಕಷ್ಟವನ್ನು ನೌಕರರು ಅನುಭವಿಸುವಂತಾಗಿದೆ.
ತಿಂಗಳ ಸಂಬಳವನ್ನೇ ನಂಬಿ ಹಲವಾರು ಲೆಕ್ಕಾಚಾರ ಹಾಕಿಕೊಂಡು ಜೀವನ ನಡೆಸುವ ಸರ್ಕಾರಿ ನೌಕರರು, ಶಿಕ್ಷಕರು ಇತ್ತೀಚಿನ ದಿನಗಳಲ್ಲಿ ಖಜಾನೆ ನಿರ್ಲಕ್ಷ್ಯದಿಂದಾಗಿ ಸಕಾಲಕ್ಕೆ ವೇತನವಾಗದೇ ಸಂಕಷ್ಟ ಅನುಭವಿಸುತ್ತಿದ್ದರೂ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ದಿವ್ಯ ಮೌನಕ್ಕೆ ಶರಣಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಜಿಲ್ಲಾ ಕೇಂದ್ರದಲ್ಲೇ ಜಿಲ್ಲಾಮಟ್ಟದ ಅಧಿಕಾರಿಗಳು ಉಳಿದುಕೊಳ್ಳಬೇಕೆಂಬ ನಿಯಮ ಗಾಳಿಗೆ ತೂರಿ ಕೋವಿಡ್ ಸೋಂಕಿನ ಆತಂಕದ ನಡುವೆಯೂ ಬೆಂಗಳೂರಿನಿಂದ ಓಡಾಡುವ ಖಜಾನಾಧಿಕಾರಿಗಳು ಕಚೇರಿಗೆ ಬರುವುದೇ ಮಧ್ಯಾಹ್ನ ೧೨ ಗಂಟೆಗೆ.
ಬಿಲ್ಲುಗಳನ್ನು ಖಜಾನೆಯ ಕಿಟಕಿಯೊಂದರಲ್ಲಿ ಸಿಬ್ಬಂದಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ, ಅಲ್ಲಿ ಬಿಲ್ಲು ಕೊಟ್ಟ ನಂತರ ಮುಗಿಯಿತು. ಮುಂದೆ ಬಿಲ್ಲು ಮೂರ್ನಾಲ್ಕು ದಿನಗಳಾದರೂ ಬಟವಾಡೆಯಾಗದಿದ್ದರೆ ಕೇಳುವುದು ಯಾರನ್ನು ಎಂಬ ಪ್ರಶ್ನೆ ಕಾಡುತ್ತದೆ.
ಖಜಾನೆ ಬಾಗಿಲು ಸದಾ ಬಂದ್ ಆಗಿರುವುದರಿಂದ ಯಾರನ್ನು ಒಳಗೆ ಬಿಡುವುದಿಲ್ಲ, ಕೇಳಿದರೆ ಕೋವಿಡ್ ನೆಪ. ದೂರವಾಣಿಯಲ್ಲಿ ಬಿಲ್ ಪಾವತಿಗೆ ಮನವಿ ಮಾಡಿದರೆ ನೀಡುವ ಉತ್ತರ ಸಂಜೆ ವೇಳೆಗೆ ಆಗಬಹುದು ಎಂಬುದು.
ಇಂತಹ ಎಷ್ಟೋ ಸಂಜೆಗಳು ಕಳೆದ ನಂತರವೇ ಬಿಲ್ಲುಗಳು ಪಾಸಾಗುವುದು. ಸರ್ಕಾರ ಖಜಾನೆ-೨ ಎಂಬ ತಂತ್ರಾಂಶ ನೀಡಿ ಶೀಘ್ರ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಂಡಿದೆ. ಆದರೆ ಜಿಲ್ಲಾ ಖಜಾನೆಯಲ್ಲಿ ಸಿಗುವ ಉತ್ತರ ಸರ್ವರ್ ಡೌನ್.
ವೇತನದ ಬಿಲ್ಲು ಖಜಾನೆಗೆ ಸಲ್ಲಿಸಿದ ಸರ್ಕಾರಿ ನೌಕರರೊಬ್ಬರು ಶೀಘ್ರ ಬಿಲ್ ಪಾವತಿಗೆ ಅಧಿಕಾರಿ ಭೇಟಿಗೆ ಅವಕಾಶ ಸಿಗದ ಕಾರಣ ಅದೇ ಅಧಿಕಾರಿಗೊಂದು ವಾಟ್ಸಫ್ ಮೆಸೇಜ್ ಹಾಕುತ್ತಾರೆ ‘ಮೇಡಂ ನನ್ನ ಸಂಬಂಧಿಯೊಬ್ಬರು ಆಸ್ಪತ್ರೆಯಲ್ಲಿ ಡೆಡ್ ಆಗಿದ್ದಾರೆ, ಆಸ್ಪತ್ರೆಗೆ ಹಣ ಪಾವತಿಸಬೇಕಾಗಿದೆ ದಯಮಾಡಿ ಶೀಘ್ರ ಬಿಲ್ ಪಾವತಿಸಿ ಎಂದು ದೀನತೆಯಿಂದ ಕೇಳಿಕೊಂಡಿದ್ದರು.
ಆದರೆ ಈ ದೀನತೆಗೂ ಖಜಾನಾಧಿಕಾರಿಗಳ ಮನ ಕರಗಲಿಲ್ಲ.
ಕಚೇರಿಗೆ ಬಂದು ಸಿಬ್ಬಂದಿಯನ್ನು ಕೂರಿಸಿಕೊಂಡು ಕೇವಲ ಸಭೆಗಳನ್ನು ನಡೆಸುವ ಖಜಾನಾಧಿಕಾರಿಗಳು, ಮೂರ್ನಾಲ್ಕು ದಿನವಾದರೂ ತಮ್ಮ ಟೇಬಲ್‌ನಿಂದ ಬಿಲ್ಲುಗಳನ್ನು ಪಾಸ್ ಮಾಡಿ ಕಳುಹಿಸುವುದೇ ಇಲ್ಲ ಎಂದು ಶಿಕ್ಷಕರೊಬ್ಬರು ನೊಂದು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸರೆಡ್ಡಿ ಹೇಳುವಂತೆ ತಾವೇ ಕೂಡಿಟ್ಟ ಜಿಪಿಎಫ್ ಹಣವನ್ನು ಅತ್ಯಂತ ತುರ್ತು ಕಾರಣಗಳಿಗಾಗಿ ಪಡೆಯಲು ನೀಡಿದ್ದ ನನ್ನದೇ ಬಿಲ್ಲು ಪಾಸಾಗಲು ೨೫ ದಿನ ಬೇಕಾಯಿತು. ಇನ್ನು ಸಾಮಾನ್ಯ ನೌಕರರ ಪಾಡೇನು ಎಂಬ ಪ್ರಶ್ನಿಸಿದರು.
ಖಜಾನೆ ನಿರ್ಲಕ್ಷ್ಯದ ಕುರಿತು ಕಳೆದ ತಿಂಗಳು ಜಿಲ್ಲಾ ನೌಕರರ ಸಂಘ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿತ್ತು. ಈ ಸಂದರ್ಭದಲ್ಲಿ ಸಮಸ್ಯೆಯಾಗದಂತೆ ಕ್ರಮವಹಿಸುವುದಾಗಿ ಪತ್ರದ ಮೂಲಕ ತಿಳಿಸಿದ್ದ ಖಜಾನಾಧಿಕಾರಿಗಳಲ್ಲಿ ಬದಲಾವಣೆ ಮಾತ್ರ ಕಾಣಲೇ ಇಲ್ಲ.
ಜಿಲ್ಲಾಧಿಕಾರಿಗಳು ಕೂಡಲೇ ಕ್ರಮವಹಿಸಿ ಬೆಂಗಳೂರಿನಿಂದ ದಿನವೂ ಓಡಾಡುವ ಇಂತಹ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಿ ಇಲ್ಲಿಗೆ ಬೇರೊಬ್ಬ ದಕ್ಷ ಅಧಿಕಾರಿಯನ್ನು ಕಳುಹಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ನೌಕರರ ಸಂಕಷ್ಟಕ್ಕೆ ಇತಿಶ್ರೀ ಹಾಡಬೇಕಾಗಿದೆ.