ನೋಬೆಲ್ ಪ್ರಶಸ್ತಿ ಪುರಸ್ಕೃತ ಸೂಕಿಗೆ ೪ ವರ್ಷ ಜೈಲು

ಯಾಂಗುನ್(ಮ್ಯಾನ್ಮಾರ್)ಡಿ.೬- ದೇಶದ್ರೋಹದ ಆರೋಪಕ್ಕೆ ಗುರಿಯಾಗಿದ್ದ ಮ್ಯಾನ್ಮಾರ್‌ನ ನಾಯಕಿ ಅಂಗ್ ಸಾನ್ ಸೂಕಿ ಅವರಿಗೆ ಇಲ್ಲಿನ ನ್ಯಾಯಾಲಯ ೪ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಸೇನಾಡಳಿತದ ವಿರುದ್ಧ ದನಿ ಎತ್ತಿದ್ದಕ್ಕಾಗಿ ದೇಶದ್ರೋಹ ಆರೋಪಕ್ಕೆ ಅವರು ಗುರಿಯಾಗಿದ್ದರು. ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿರುವ ಸೂಕಿ ಅವರಿಗೆ ೪ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಕಳೆದ ಫೆಬ್ರವರಿಯಲ್ಲಿ ಮ್ಯಾನ್ಮಾರ್‌ನಲ್ಲಿ ಸೇನೆ ಧಂಗೆ ಎದ್ದು ನಾಗರಿಕ ಸರ್ಕಾರವನ್ನು ಪತನಗೊಳಿಸಿತ್ತು. ಅಂದು ಆಡಳಿತಾರೂಢ ಪಕ್ಷದ ಕೌನ್ಸಿಲರ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸೇನೆ ವಶಕ್ಕೆ ಪಡೆದು ಗೃಹ ಬಂಧನದಲ್ಲಿರಿಸಿತ್ತು. ಅಷ್ಟೇ ಅಲ್ಲ ದೇಶದಲ್ಲಿ ೧ ವರ್ಷ ತುರ್ತು ಪರಿಸ್ಥಿತಿ ಹೇರಲಾಗಿತ್ತು.
ತದ ನಂತರ ಸೂಕಿ ಅವರ ವಿರುದ್ಧ ದೇಶದ್ರೋಹ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.
ಸೂಕಿ ಅವರನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆ ಮತ್ತು ಹಲವು ರಾಷ್ಟ್ರಗಳು ಒತ್ತಡ ಹೇರಿದ್ದರೂ ಪ್ರಯೋಜನವಾಗಿಲ್ಲ. ಇಂದು ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ,ಸೂಕಿ ಅವರಿಗೆ ೪ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.