ನೋಡುಗರ ಆಕರ್ಷಿಸುವ ಮೇದಾರ ಕಾಮಣ್ಣ


ಹುಬ್ಬಳ್ಳಿ,ಮಾ.26: ಮೇದಾರ ಕಾಮಣ್ಣ ಎಂದರೆ ಒಂದು ವಿಶೇಷ. ಬೃಹದಾಕಾರದ ಕಾಮಣ್ಣನ ರೂಪ ಕಣ್ಣಮುಂದೆ ಬರುತ್ತದೆ.
ನಗರದ ಹಳೇ ಹುಬ್ಬಳ್ಳಿ ಹಾಗೂ ಹೊಸ ಹುಬ್ಬಳ್ಳಿ ಮೇದಾರ ಓಣಿಗಳಲ್ಲಿ ಮೇದಾರ ಸಮಾಜದವರು ಹಲವಾರು ವರ್ಷಗಳಿಂದ ಬಿದಿರಿನಿಂದ ತಯಾರಿಸಿದ ಬೃಹದಾಕಾರದ ಕಾಮಣ್ಣನನ್ನು ಪ್ರತಿಷ್ಠಾಪಿಸುತ್ತಾರೆ. ಈ ಕಾಮಣ್ಣ ಹೆಚ್ಚು ಪ್ರಸಿದ್ಧಿ.
ಬಿದಿರನ್ನು ಸೀಳಿ, ಹದಗೊಳಿಸಿ ಕೌಶಲ್ಯಗಳಿಂದ ಬುಟ್ಟೆ, ಚಾಪೆಗಳ ತಯಾರಿಕೆಯಲ್ಲಿಯೇ ಜೀವನ ಕಟ್ಟಿಕೊಂಡ ಮೇದಾರರು, ಸುಮಾರು 18 ಅಡಿಗಳಷ್ಟು ಎತ್ತರದ
ಬಿದಿರಿನ ಕಾಮಣ್ಣನನ್ನು ಹೋಳಿ ಹುಣ್ಣಿಮೆಯಂದು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.
ಐದು ದಿನಗಳ ಕಾಲ ಕಾಮದೇವನನ್ನು ಪೂಜಿಸಿ, ಮನೋಕಾಮನೆಗಳ ಈಡೇರಿಕೆಗೆ ಪ್ರಾರ್ಥಿಸಲಾಗುತ್ತದೆ.
ಕಾಮಣ್ಣನ ಬಣ್ಣದ ವಸ್ತ್ರಗಳು, ಕೊರಳಿಗೆ ಹಾಕಿರುವ
ಉದ್ದದ ಬಗೆ ಬಗೆಯ ಹೂವಿನ ಮಾಲೆಗಳು, ಎರೆಡೂ ಕೈಗಳನ್ನು ಭುಜಕ್ಕೆ ಸಮಾನ, ಅಗಲವಾಗಿ ಚಾಚಿ ನಿಂತ ನೋಟ, ನೋಡುಗರನ್ನು ಆಕರ್ಷಿಸುತ್ತವೆ.
ಐದನೇಯ ದಿನ ಬೆಳಿಗ್ಗೆಯಿಂದಲೇ ಓಣೆಯ ಹಿರಿಯರು, ಯುವಕರು, ಚಿಣ್ಣರು, ಮಹಿಳೆಯರು ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಮನೆಯಲ್ಲಿ ಮಾಡಿದ ಹೋಳಿಗೆ, ಮತ್ತಿತರ ಭಕ್ಷ್ಯ ಸವಿಯುತ್ತಾರೆ. ನಂತರ ಮಧ್ಯಾಹ್ನದ ವೇಳೆಗೆ ಕಾಮಣ್ಣನನ್ನು ಮೆರವಣಿಗೆ ಮಾಡಲಾಗುತ್ತದೆ. ಓಣೆಯ ಮಧ್ಯೆ ಸಂಗ್ರಹಿಸಿಟ್ಟ ಕಟ್ಟಿಗೆಯ ಬಳಿ ಕಾಮಣ್ಣನನ್ನು ತಂದು ದಹಿಸಲಾಗುತ್ತದೆ.