
ಬೆಂಗಳೂರು,ಮಾ.೪:ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಪುತ್ರನ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕ ಮೇಲೂ ಶಾಸಕರ ವಿರುದ್ಧ ಕ್ರಮಕೈಗೊಳ್ಳದಿರುವುದನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ,ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಗೆ ಸುಳ್ಳು ಮನೆ ದೇವರಾದರೆ, ಭ್ರಷ್ಟಾಚಾರ ಪಕ್ಷದ ಅಧಿಕೃತ ಕಾರ್ಯಕ್ರಮ, ದಾಖಲೆ ಸಮೇತ ಕಂತೆ ಕಂತೆ ನೋಟು ಸಿಕ್ಕ ಮೇಲೂ ಬಿಜೆಪಿ ಶಾಸಕರ ಮೇಲೆ ಕ್ರಮ ಏಕಿಲ್ಲ ಮುಖ್ಯಮಂತ್ರಿ ಬೊಮ್ಮಾಯಿರವರೇ ಎಂದು ಬಿ.ಕೆ. ಹರಿಪ್ರಸಾದ್ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧವೂ ಹರಿಹಾಯ್ದಿರುವ ಹರಿಪ್ರಸಾದ್‌ರವರು, ನರೇಂದ್ರಮೋದಿರವರೇ ಶಾಸಕರ ಕಮಿಷನ್ ವ್ಯವಹಾರದಲ್ಲೇ ನಿಮ್ಮ ಮೌನದ ಪಾಲೆಷ್ಟು ಎಂದು ವ್ಯಂಗ್ಯವಾಡಿದ್ದಾರೆ.ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿರುವ ಭ್ರಷ್ಟ ಬಿಜೆಪಿ ಸರ್ಕಾರ, ದೇಶದೆದುರು ರಾಜ್ಯದ ಮಾನ ಹರಾಜಿಗಿಟ್ಟಿದೆ. ಶೇ. ೪೦ ರಷ್ಟು ಭ್ರಷ್ಟಾಚಾರದ ಸಾಕ್ಷಿ ಸಿಕ್ಕರೂ ತಾಕತ್ತು, ಧಮ್ಮು-ಹಮ್ಮು-ಬಿಮ್ಮುಗಳು ಯಾವ ಬಿಲದಲ್ಲಿ ಅಡಗಿ ಕುಳಿತಿವೆ ಎಂದು ಅವರು ಗೇಲಿ ಮಾಡಿದ್ದಾರೆ.ನಾಚಿಕೆ, ಮಾನ-ಮರ್ಯಾದೆ, ಗೌರವವಿದ್ದರೆ ರಾಜ್ಯದ ಜನರ ಕ್ಷಮೆ ಕೇಳಿ. ರಾಜೀನಾಮೆ ಕೊಟ್ಟು ತೊಲಗಿ ಎಂದು ಆಗ್ರಹಿಸಿರುವ ಬಿ.ಕೆ. ಹರಿಪ್ರಸಾದ್, ಘನತೆಯುತ ರಾಜ್ಯಕ್ಕೆ ಕಮಿಷನ್ ರಾಜ್ಯದ ಮಸಿ ಬಳಿದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.