ನೋಟು ಎಸೆದ ಪ್ರಕರಣ:ಡಿಕೆಶಿ ವಿರುದ್ಧ ಬಿಜೆಪಿ ದೂರು

ಬೆಂಗಳೂರು, ಮಾ.29- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಿನ್ನೆ ರೋಡ್ ಶೋ ವೇಳೆ ಜನರ ಮೇಲೆ 500 ರೂ. ಮುಖಬೆಲೆಯ ನೋಟುಗಳನ್ನು ಎಸೆದ ಪ್ರಕರಣ ಕುರಿತು ಬಿಜೆಪಿ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ವಿಧಾನಸಭೆಗೆ ಚುನಾವಣೆಗೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ದೂರು ದಾಖಲಿಸಿದೆ.
ಶ್ರೀರಂಗಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ವೇಳೆ ತೆರೆದ ಬಸ್​​ನಲ್ಲಿ ರೋಡ್​ಶೋ ನಡೆಸಿದ್ದ ಡಿಕೆಶಿ ಕಲಾವಿದರತ್ತ 500 ರೂ ಮುಖ ಬೆಲೆಯ ನೋಟುಗಳನ್ನು ಎರಚಿದ್ದರು.
ಈ ಬಗ್ಗೆ ಬಿಜೆಪಿ ಮುಖಂಡ ರವಿಕುಮಾರ್ ನೇತೃತ್ವದ ನಿಯೋಗ ಡಿಕೆಶಿ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜತೆಗೆ, ಎಸ್​ಡಿಪಿಐ ಮುಖಂಡರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರವಾಗಿಯೂ ದೂರು ಸಲ್ಲಿಸಿದ್ದಾರೆ.
ಪ್ರಜಾಧ್ವನಿ ಯಾತ್ರೆ ವೇಳೆ ಡಿಕೆ ಶಿವಕುಮಾರ್ ತೆರೆದ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಇದೇ ವೇಳೆ ಒಂದು ಬದಿಯಲ್ಲಿ ಕಲಾವಿದರ ತಂಡ ವಿವಿಧ ಪ್ರದರ್ಶನಗಳನ್ನು ನಡೆಸುತ್ತಿತ್ತು. ಅವರತ್ತ ಡಿಕೆಶಿ 500 ರೂ. ಮುಖಬೆಲೆಯ ನೋಟುಗಳನ್ನು ಎಸೆದಿದ್ದರು. ಡಿಕೆಶಿ ನೋಟು ಎಸೆಯುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತ್ತು.