ನೋಟು ಅಮಾನೀಕರಣ ತಂದ ಗೊಂದಲ

ಕೋಲಾರ,ಮೇ,೨೪:ರಿಸರ್ವ್ ಬ್ಯಾಂಕ್ ಅಫ್ ಇಂಡಿಯ ಮೇ,೨೩ರ ಮಂಗಳವಾರದಿಂದ ಎಲ್ಲಾ ಬ್ಯಾಂಕ್‌ಗಳಲ್ಲಿ ಸೆಪ್ಟೆಂಬರ್ ಮಾಹೆಯ ವರೆಗೆ ೨೦೦೦ ರೊಪಾಯಿ ಮುಖ ಬೆಲೆಯ ನೋಟುಗಳನ್ನು ಹಿಂಪಡೆಯಲಾಗುವುದು ನಂತರದಲ್ಲಿ ಈ ನೋಟು ತನ್ನ ಮೌಲ್ಯವನ್ನು ಕಳೆದು ಕೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪ್ರಕಟಣೆ ನೀಡಿದ ನಂತರದಲ್ಲಿ ಸಾರ್ವಜನಿಕ ವಲಯದಲ್ಲಿ ತುಸು ಗೊಂದಲ ಕಂಡು ಬಂದಿದೆ.
ಬ್ಯಾಂಕ್‌ಗಳಲ್ಲಿ ೨೦೦೦ ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಚಾಲನೆ ದೊರಕಿದೆ. ಸಾರ್ವಜನಿಕ ಗ್ರಾಹಕರು ತಮ್ಮ ಮನೆಗಳಲ್ಲಿದ್ದ ೨೦೦೦ ಮುಖ ಬೆಲೆಯ ನೋಟುಗಳನ್ನು ತಂದು ಬ್ಯಾಂಕಿನ ಖಾತೆಗೆ ಜಮೆ ಮಾಡಿದರೆ ಇನ್ನು ಕೆಲವರು ವಿನಿಮಯ ಮಾಡಿ ಕೊಂಡು ಹೋಗುತ್ತಿರುವುದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರಾರಂಭವಾಗಿದ್ದು ಬ್ಯಾಂಕಿನ ಕ್ಯಾಷಿಯರ್ ಕೌಂಟರ್‌ಗಳು ಬ್ಯುಸಿಯಾಗಿರುವುದು ಕಂಡು ಬರುತ್ತಿದೆ.
ಕಳೆದ ಬಾರಿಯಂತೆ ಬ್ಯಾಂಕಿನ ಮುಂದೆ ಸರದಿ ಸಾಲುಗಳು ಕಂಡು ಬಾರದಿದ್ದರೂ ಮಾರುಕಟ್ಟೆಯಲ್ಲಿ ೨೦೦೦ ಮುಖ ಬೆಲೆಯ ನೋಟುಗಳನ್ನು ಸಣ್ಣಪುಟ್ಟ ವ್ಯಾಪಾರಿಗಳು ಗ್ರಾಹಕರ ಬಳಿ ಸ್ವೀಕರಿಸಲು ನಿರಾಕರಿಸುತ್ತಿದ್ದರೆ, ದೊಡ್ಡಮಟ್ಟದ ಸಗಟು ವ್ಯಾಪಾರಿಗಳು ಮಾತ್ರ ೨೦೦೦ ರೂ ನೋಟುಗಳನ್ನು ಸ್ವೀಕರಿಸುತ್ತಿದ್ದಾರೆ. ಈ ನೋಟನ್ನು ಬದಲಾವಣೆ ಮಾಡಿ ಕೊಳ್ಳಲು ಸುಮಾರು ೩ ತಿಂಗಳ ಕಾಲ ಅವಕಾಶ ಇರುವುದರಿಂದ ಯಾವೂದೇ ಗೊಂದಲಕ್ಕೆ ಒಳಗಾಗದೆ ಸ್ವೀಕರಿಸುತ್ತಿದ್ದಾರೆ.
ಅದರೆ ಇಷ್ಟು ದಿನಗಳಿಂದ ೨೦೦೦ ಮುಖ ನೋಟುಗಳು ವಿರಳವಾಗಿ ಚಲಾವಣೆಯಾಗುತ್ತಿದ್ದು ಈಗಾ ಆರ್.ಬಿ.ಐ. ಪ್ರಕಟಣೆಯಿಂದ ಎಚ್ಚತ್ತು ಕೊಂಡಿರುವ ಸಾರ್ವಜನಿಕರು ತಮ್ಮ ಸಂಗ್ರಹದಲ್ಲಿದ್ದ ಒಂದೆರಡು ನೋಟಿನಿಂದ ದೈನಿಂದಿನ ವಹಿವಾಟಿನಲ್ಲಿ ಚಲಾವಣೆಯನ್ನು ಹಂತ ಹಂತವಾಗಿ ಪ್ರಾರಂಭಿಸಲು ಮುಂದಾಗಿದ್ದಾರೆ. ಕೆಲವರು ಬ್ಯಾಂಕ್‌ಗಳಿಗೆ ಹೋಗಿ ಸಮಯವನ್ನು ವ್ಯರ್ಥ ಮಾಡುವ ಬದಲಿಗೆ ತಮ್ಮ ವಾಹನಗಳಿಗೆ ರೂ ೧೦೦ ಅಥವಾ ೨೦೦ ಪೆಟ್ರೋಲ್‌ಗಳನ್ನು ಹಾಕಿಸಿ ಕೊಂಡು ೨೦೦೦ ಮುಖ ಬೆಲೆಯ ನೋಟನ್ನು ನೀಡಿ ಚಿಲ್ಲರೆ ಪಡೆಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.
ಇನ್ನ ಕೆಲವರು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಊಟ,ತಿಂಡಿ ಮಾಡಿ ೨೦೦೦ ಮುಖ ಬೆಲೆಯ ನೋಟನ್ನು ನೀಡಿ ಚಿಲ್ಲರೆ ಪಡೆದು ಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕೆಲವಡೆ ನೋಟನ್ನು ಸ್ವೀಕರಿಸಲು ನಿರಾಕರಿಸಿದ ಸಂದರ್ಭದಲ್ಲಿ ಮಾತಿನ ಚಕಮಕಿಗಳು ಸಾಮಾನ್ಯವಾಗಿದೆ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಸ್ತುಗಳನ್ನು ಖರೀದಿಸಿದ ಗ್ರಾಹಕನು ೨ ಸಾವಿರ ನೋಟು ನೀಡಿದಾಗ ಚಿಲ್ಲರೆ ಸಮಸ್ಯೆಗಳು ಉಂಟಾಗುತ್ತಿದೆ.
ನೋಟು ವಿನಿಮಯಕ್ಕೆ ಸುಲಭ ಮಾಗೋಪಾಯವೆಂದರೆ ನಮ್ಮ ಬಳಿ ಬಂದು ಚಿಲ್ಲರೆ ಸಮಸ್ಯೆ ತಂದೊಡ್ಡುವ ಬದಲು ಸೆಪ್ಟೆಂಬರ್ ಅಂತ್ಯದವರೆಗೆ ಆರ್.ಬಿ.ಐ. ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಿರುವುದರಿಂದ ಸಾವಕಾಶವಾಗಿ ಬದಲಾವಣೆ ಮಾಡಿ ಕೊಳ್ಳಲಿ ಎಂಬುವುದು ಚಿಲ್ಲರೆ ವ್ಯಾಪಾರಿಗಳ ಪ್ರತಿಪಾದನೆಯಾಗಿದೆ.
ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಬಹುತೇಕ ರೈತರು ತರುವ ಬೆಳೆಗಳಿಗೆ ೨ ಸಾವಿರ ರೂ ನೋಟುಗಳನ್ನು ಪಡೆಯಲು ನಿರಾಕರಿಸಿ ನೋಟು ವಿನಿಮಯಕ್ಕೆ ನಾವ್ಯಾಕ್ಕೆ ಬ್ಯಾಂಕಿಗೆ ಹೋಗ ಬೇಕು ನಾವೇನು ಖಾತೆಗೆ ಜಮೆ ಮಾಡುವಷ್ಟು ಶ್ರೀಮಂತರಲ್ಲ ಬಡ ರೈತರು ಸ್ವಾಮಿ, ಬೇಕಾದರೆ ಅವರೇ ಹೋಗಲಿ ಬಿಡಿ ನಮಗೆ ೫೦೦ ಮುಖ ಬೆಲೆಯ ನೋಟುಗಳನ್ನು ನೀಡಲಿ ಅವರುಗಳೇ ತಾನೆ ನಿತ್ಯ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುವುದು ನಾವು ಏಕೆ ಹೋಗ ಬೇಕು ಎಂಬುವುದು ವಾಗ್ದಾಳಿ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.